ಬಾಗೇಪಲ್ಲಿ, ಫೆ.21- ಅಕ್ಕ ಪಕ್ಕದ ಎರಡು ದೇವಸ್ಥಾನಗಳ ಹುಂಡಿ ಒಡೆದು ಹಣ ಕಳ್ಳತನ ಮಾಡಿ ಸಾವಿರಾರು ರೂಪಾಯಿಗಳನ್ನು ದೋಚಿರುವ ಘಟನೆ ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟಣದ ಮುಖ್ಯರಸ್ತೆಯಲ್ಲಿರುವ ಶ್ರೀ ಬೈಲಾಂಜನೇಯಸ್ವಾಮಿ ದೇವಸ್ಥಾನ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ.
ಇಂದು ಬೆಳಗಿನ ಜಾನ ಶ್ರೀ ಬೈಲಾಂಜನೇಯಸ್ವಾಮಿ ದೇವಸ್ಥಾನದ ಆವರಣ ಸ್ವಚ್ಛಗೊಳಿಸುವ ಮಹಿಳೆಯು ಆವರಣದ ಬಾಗಿಲು ತೆರೆದಾಗ ಕಳ್ಳತನ ನಡೆದಿರುವುದು ಗೊತ್ತಾಗಿ ದೇವಸ್ಥಾನದ ಅರ್ಚಕರ ಗಮನಕ್ಕೆ ತಂದಿದ್ದು, ಕೂಡಲೇ ಅರ್ಚಕರು ಪೊಲೀಸರ ಗಮನಕ್ಕೆ ತಂದಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಲಾಗಿ, ಕಳ್ಳರು ದೇವಸ್ಥಾನದ ಹಿಂಭಾಗದ ಮಳಿಗೆಗಳ ಮೇಲ್ಟಾವಣಿಯ ಮುಖಾಂತರ ದೇವಸ್ಥಾನದೊಳಗೆ ಇಳಿದು ದೇವಸ್ಥಾನಕ್ಕೆ ಅಳವಡಿಸಲಾಗಿದ್ದ ಎರಡು ಕಬ್ಬಿಣದ ಗ್ರಿಲ್ಸ್ಗಳನ್ನು ಮುರಿದು, ಗರ್ಭಗುಡಿಯ ಬಾಗಿಲನ್ನು ಮುರಿದು ದೇವಸ್ಥಾನದ ಒಳಗಡೆ ಇಡಲಾಗಿದ್ದ ಹುಂಡಿಯನ್ನು ಒಡೆದು ಹುಂಡಿಯಲ್ಲಿದ್ದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ದೇವಸ್ಥಾನವು ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು ಕಳೆದ 14 ತಿಂಗಳುಗಳಿಂದ ಹುಂಡಿ ತೆರೆದಿಲ್ಲ ಎನ್ನಲಾಗಿದ್ದು, ಪ್ರತಿವರ್ಷ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಹಣ ಹುಂಡಿಯಲ್ಲಿ ಸಂಗ್ರಹವಾಗುತ್ತಿತ್ತು ಎನ್ನಲಾಗಿದೆ.
ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ : ಶ್ರೀ
ಬೈಲಾಂಜನೇಯಸ್ವಾಮಿ ದೇವಸ್ಥಾನದ ಪಕ್ಕದಲ್ಲೇ ಇರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹುಂಡಿಯನ್ನು ಸಹ ಒಡೆದು ಹಣ ದೋಚಲಾಗಿದ್ದು, ಕಳೆದ ಜನವರಿ 15 ರಂದು ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಅಂದಿನಿಂದ ಈ ವರೆವಿಗೂ ಸಂಗ್ರಹವಾಗಿ ಇರಬಹುದು ಎನ್ನಲಾಗಿರುವ ಸುಮಾರು 10-15 ಸಾವಿರಷ್ಟು ಕಳುವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಸಿಸಿ ಕ್ಯಾಮರಾ ಅಳವಡಿಸಲು ಆಗ್ರಹ :
ಶ್ರೀ ಬೈಲಾಂಜನೇಯಸ್ವಾಮಿ ದೇವಸ್ಥಾನವು ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಈ ಕೂಡಲೇ ಆ ಕಾರಿಗಳು ಸರ್ಕಾರದ ಗಮನಕ್ಕೆ ತಂದು ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಪ್ರಶಾಂತ್ ವರ್ಣಿ, ಅಪರಾಧ ವಿಭಾಗದ ಆರಕ್ಷಕ ಉಪ ನಿರೀಕ್ಷಕ ಮುನಿರತ್ನಂ, ಮತ್ತು ಸಿಬ್ಬಂದಿ, ಬೆರಳಚ್ಚು ತಜ್ಞರು, ಡಾಗ್ ಸ್ಥಾ ಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಗೇಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.