ರಾಮಗಢ, ಫೆ.21- ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯನ್ನು ಮನೆಯಲ್ಲಿ ಲಾಕ್ ಮಾಡಿ ಪತ್ನಿ, ಮಕ್ಕಳು ಮತ್ತು ಅಳಿಯಂದಿರೊಂದಿಗೆ ಮಹಾ ಕುಂಭದಲ್ಲಿ ಪವಿತ್ರ ಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ತೆರಳಿರುವ ಘಟನೆ ನಡೆದಿದೆ.
ರಾಮಗಢ ಪೊಲೀಸ್ ಠಾಣೆ ವ್ಯಾಪ್ತಿಯ ಸುಭಾಷ್ ನಗರ ಕಾಲೋನಿಯಲ್ಲಿರುವ ಸೆಂಟ್ರಲ್ ಕೋಲ್ ಫೀಲ್ಡ್ ಲಿಮಿಟೆಡ್ (ಸಿಸಿಎಲ್) ನ ಕ್ವಾರ್ಟಸ್‌ನಲ್ಲಿ ಮನೆಯಲ್ಲಿ ಸೆರೆಯಾಗಿದ್ದ 65 ವರ್ಷದ ತಾಯಿಯನ್ನು ಪೊಲೀಸರು ರಕ್ಷಿಸಿದ್ದಾರೆ.
ಮಗ, ಸೊಸೆ ಮತ್ತಿತರರು ಮನೆಯಲ್ಲಿ ಕೂಡಿಹಾಕಿ ಮಹಾ ಕುಂಭಕ್ಕೆ ತೆರಳಿದ್ದ ಸಂದರ್ಭದಲ್ಲಿ ಆ ತಾಯಿ ಮನೆಯಲ್ಲಿದ್ದ ಅಕ್ಕಿ ನುಚ್ಚು ತಿಂದು ಬದುಕುಳಿದಿದ್ದಾರೆ. ನುಚ್ಚು ಖಾಲಿಯಾದಾಗ ಆ ತಾಯಿ ಅಳುತ್ತಿರುವ ಶಬ್ದ ಕೇಳಿ ನೆರೆಹೊರೆಯವರು ಮನೆ ಬೀಗ ಒಡೆದು ಪರಿಶೀಲಿಸಿದಾಗ ಪಾಪಿ ಪುತ್ರನ ಬಂಡವಾಳ ಬಯಲಾಗಿದೆ.
ರಾಮಗಢ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಪರಮೇಶ್ವರ ಪ್ರಸಾದ್ ಮಾತನಾಡಿ, ಸಂಜು ದೇವಿ ಎಂದು ಗುರುತಿಸಲ್ಪಟ್ಟ ವೃದ್ಧ ಮಹಿಳೆಯನ್ನು ಆಕೆಯ ಮಗ ಅಖಿಲೇಶ್ ಕುಮಾರ್ ಸೋಮವಾರದಿಂದ ತನ್ನ ಸಿಸಿಎಲ್ ಕ್ವಾರ್ಟಸ್ ನಲ್ಲಿ ಲಾಕ್ ಮಾಡಿದ್ದಾನೆ. ಕುಮಾರ್ ತಮ್ಮ ಕುಟುಂಬದೊಂದಿಗೆ ಪ್ರಯಾಗ್ ರಾಜ್ ನ ಮಹಾ ಕುಂಭಕ್ಕೆ ತೆರಳಿದ್ದಾರೆ. ಮಗಳು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಆಕೆಯನ್ನು ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.