ವಾರಣಾಸಿ(ಉ.ಪ್ರ),ಫೆ. 21 – ಕುಂಭಮೇಳ ಮುಗಿಸಿ ಕ್ರೂಸರ್ ವಾಹನದಲ್ಲಿ ಕಾಶಿಗೆ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೀದರ್‌ನ ಒಂದೇ ಕುಟುಂಬದ ಐದು ಮಂದಿ ದಾರುಣವಾಗಿ ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಬೀದರ್‌ನ ಲಾಡಗೇರಿ ನಿವಾಸಿಗಳಾದ ಸುನೀತಾ(35), ಸಂತೋಷ್ (43), ನೀಲಮ್ಮ(60) ಸೇರಿದಂತೆ ಐದು ಮಂದಿ ಮೃತಪಟ್ಟಿದ್ದಾರೆ.
ಗಾಯಾಳುಗಳನ್ನು ಬನರಸದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಫೆ.18 ರಂದು ಎರಡು ಕುಟುಂಬದ 12 ಮಂದಿ ಸದಸ್ಯರು ಕ್ರೂಸರ್ ವಾಹನದಲ್ಲಿ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ಗೆ ತೆರಳಿದ್ದು, ಅಲ್ಲಿ ಪವಿತ್ರ ಸ್ನಾನ ಮುಗಿಸಿ ಇಂದು ಬೆಳಗ್ಗೆ 7ಗಂಟೆ ಸುಮಾರಿಗೆ ಕಾಶಿಗೆ ಹೋಗುತ್ತಿದ್ದರು.
ವಾರಣಾಸಿ ಜಿಲ್ಲೆಯ ದೆಹಲಿ-ಕೋಲ್ಕತ್ತಾ ಹೆದ್ದಾರಿಯ ಮೀರಾಜ್ ಪೂರ ಬಳಿಯ ರೂಪಾಪೂರ ಸಮೀಪ ಅತೀವೇಗ ಹಾಗೂ ಅಜಾಗರೂಕತೆಯಿಂದ ಮುನ್ನುಗ್ಗಿದ ಲಾರಿ ಕ್ರೂಸರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಮಿರ್ಜಾಮುರಾದ್ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಕ್ರೂಸರ್ ವಾಹನದಲ್ಲಿ ಸಿಕ್ಕಿಕೊಂಡಿದ್ದ ಐದು ಮಂದಿಯ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ವಾಹನದಲ್ಲಿ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದ 9 ಮಂದಿ ಗಾಯಾಳುಗಳನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಅಪಘಾತದ ಸುದ್ದಿ ತಿಳಿದು ಬೀದರ್‌ನ ಲಾಡಗೇರಿಯಲ್ಲಿ ನೀರವ ಮೌನ ಆವರಿಸಿದೆ.