Sunday, February 23, 2025
Homeರಾಜ್ಯ9 ವಿವಿಗಳ ಮುಚ್ಚುವ ನಿರ್ಧಾರ ಅವಿವೇಕದ ಪರಮಾವಧಿ : ಬಿವೈವಿ

9 ವಿವಿಗಳ ಮುಚ್ಚುವ ನಿರ್ಧಾರ ಅವಿವೇಕದ ಪರಮಾವಧಿ : ಬಿವೈವಿ

Decision to close 9 universities is the height of foolishness

ಬೆಂಗಳೂರು,ಫೆ.22- ಹಣಕಾಸಿನ ನೆಪವೊಡ್ಡಿ ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರ ಅವಿವೇಕತನದ ಪರಮಾವಧಿ. ಗ್ರಾಮೀಣ ಭಾಗದಲ್ಲಿ ಬಡವರ ಭವಿಷ್ಯ ರೂಪಿಸುವ ವಿವಿಗಳನ್ನು ಮುಚ್ಚಲು ನಾವು ಬಿಡುವುದಿಲ್ಲ, ಈ ಬಗ್ಗೆ ದೊಡ್ಡಮಟ್ಟದಲ್ಲಿ ಹೋರಾಟ ನಡೆಸುತ್ತೇವೆ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.

ವಿವಿಧ ವಿಶ್ವವಿದ್ಯಾಲಯಗಳ ಕೌನ್ಸಿಲ್ ಸದಸ್ಯರು ಮತ್ತು ಎಬಿವಿಪಿ ನಾಯಕರು ಭಾಗವಹಿಸಿದ್ದ ಸಭೆಯಲ್ಲಿ, ವಿವಿಗಳನ್ನು ಮುಚ್ಚುವ ಸರ್ಕಾರದ ನಿರ್ಧಾರವನ್ನು ವಿರೋಧಿಸಲಾಗಿದೆ. ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಹಣಕಾಸಿನ ಕೊರತೆ ಹೆಸರಿನಲ್ಲಿ 9 ವಿವಿಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿರುವುದು ಅವಿವೇಕತನದಿಂದ ಕೂಡಿದೆ. ಕೂಡಲೇ ಸರ್ಕಾರ ಈ ನಿರ್ಧಾರವನ್ನು ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದ್ದಾರೆ.

ಸರ್ಕಾರದ ಈ ನಿರ್ಧಾರ ನಾಚಿಕೆಗೇಡು. ಈ ವಿಚಾರದಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು. ಜನರ ಮೇಲೆ ಹೆಚ್ಚಿನ ತೆರಿಗೆ ಹೊರಿಸಿ ಗ್ಯಾರಂಟಿಗಳು ನಿಲ್ಲದಂತೆ ನೋಡಿಕೊಳ್ಳುತ್ತಿರುವ ಸರ್ಕಾರ, ಹಿಂದುಳಿದ ಪ್ರದೇಶಗಳ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸ್ಥಾಪಿಸಿರುವ ವಿಶ್ವವಿದ್ಯಾಲಯಗಳನ್ನು ಮುಚ್ಚದೆ ಸಿಎಸ್‌ಆರ್ ಅನುದಾನ, ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಇದೇ ವೇಳೆ ವಿವಿಗಳ ಬಂದ್ ವಿಚಾರ ಮೇಲ್ವಿಚಾರಣೆ ಮಾಡಲು ರಚಿಸಲಾಗಿರುವ ಉಪಸಮಿತಿ ಬಗ್ಗೆ ಪ್ರಶ್ನಿಸಿದ ಅವರು, ಸಮಿತಿಯಲ್ಲಿ ಶೈಕ್ಷಣಿಕ ತಜ್ಞರ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ರಾಷ್ಟ್ರೀಯ ಜ್ಞಾನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಈ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲಾಗಿದೆ, ಉಪ ಸಮಿತಿಯು ವಿವಿಗಳ ಬಂದ್ ಗೆ ಸೂಚಿಸಿದೆ. ಆದರೆ ಕಳಪೆ ಗುಣಮಟ್ಟದ ಖಾಸಗಿ ವಿಶ್ವವಿದ್ಯಾಲಯಗಳ ವಿರುದ್ಧ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ವಿಕೇಂದ್ರೀಕರಣದ ನಂತರ ವಿವಿಗಳಲ್ಲಿ ಒಟ್ಟು ದಾಖಲಾತಿ ಅನುಪಾತ ಹೆಚ್ಚಾಗಿದೆ. ಇದೀಗ ವಿವಿಗಳ ಬಂದ್ ಮಾಡುವುದರಿಂದ ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಲಾಭವಾಗಲಿದೆ.
ಇದೀಗ ಬಂದ್ ಮಾಡಲು ಮುಂದಾಗಿರುವ ವಿವಿಗಳು ಚಾಮರಾಜನಗರ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿದ್ದು, ಇಲ್ಲಿರುವ ಜನರಿಗೆ ಈಗಾಗಲೇ ಶಿಕ್ಷಣ ವ್ಯವಸ್ಥೆಗಳಿಲ್ಲ. ಇದೀಗ
ವಿವಿಗಳನ್ನು ಬಂದ್ ಮಾಡುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಹೀಗಾಗಿ ಸರ್ಕಾರ ವಿವಿಗಳ ಬಂದ್ ಮಾಡುವ ಬದಲು, ಜಿಲ್ಲೆಗಳಲ್ಲಿ ಶಿಕ್ಷಣವನ್ನು ಸುಧಾರಿಸುವತ್ತ
ಗಮನಹರಿಸಬೇಕೆಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

RELATED ARTICLES

Latest News