ಹಾಸನ, ಫೆ.23- ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತರ ಮೇಲೆ ಖಾಸಗಿ ಬಸ್ಸು ಹರಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಶಾಂತಿ ಗ್ರಾಮದ ಕೆಂಚಟ್ಟಹಳ್ಳಿ ಬಳಿ ಇಂದು ಬೆಳಗಿನ ಜಾವ ಸಂಭವಿಸಿದೆ.
ಮೃತ ದುರ್ದೈವಿಗಳನ್ನು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಅನಗೋಳು ಗ್ರಾಮದ ಸುರೇಶ (50), ಕುಮಾರ್ (54) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಭಕ್ತ ದಿನೇಶ್‌ನನ್ನು ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾಶಿವರಾತ್ರಿ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿ ಸಹ ಗ್ರಾಮದಿಂದ ಭಕ್ತರು ಶ್ರೀ ಕ್ಷೇತ್ರಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ವೇಗವಾಗಿ ಬಂದ ಖಾಸಗಿ ಬಸ್ ಚಾಲಕ ಭಕ್ತರ ಮೇಲೆ ಬಸ್ಸು ಹರಿಸಿದ್ದಾನೆ ಎನ್ನಲಾಗಿದೆ.
ಚಾಲಕನ ನಿರ್ಲಕ್ಷ್ಯಕ್ಕೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಕೂಡಲೇ ಗಾಯಾಳುವನ್ನು ರಕ್ಷಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಬಸ್ಸು ಹಾಗೂ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.