ಲಿಮಾ,ಫೆ.23- ವಾಯುವ್ಯ ಪೆರುವಿನ ಶಾಪಿಂಗ್ ಮಾಲ್ ಒಂದರ ಆಹಾರ ಮಳಿಗೆಯ ಮೇಲ್ಬಾವಣಿ ಕುಸಿದು ಬಿದ್ದು ಆರು ಮಂದಿ ಸಾವಿಗೀಡಾಗಿದ್ದಾರೆ. ಕನಿಷ್ಠ ಪಕ್ಷ 78 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ರಕ್ಷಣಾ ಸಚಿವರು ತಿಳಿಸಿದ್ದಾರೆ.
ಲಾ ಲಿಬರ್‌ಟ್ಯಾಡ್ ಪ್ರಾಂತ್ಯದ ನಗರವೊಂದರಲ್ಲಿರುವ ರಿಯಲ್ ಪ್ಲಾಜಾ ಟ್ರುಜಿಲ್ಲೋದ ಕಬ್ಬಿಣ ಭಾರವಾದ ಮೇಲಾವಣಿ ಕುಸಿದಾಗ ನೂರಾರು ಮಂದಿ ಸ್ಥಳದಲ್ಲಿದ್ದರು. ಇದು ಭಾರಿ ಸಾವು ನೋವಿಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
ಲಾ ಲಿಬರ್‌ಟ್ಯಾಡ್‌ನ ಅಗ್ನಿಶಾಮಕ ದಳ ನೀಡಿರುವ ಮಾಹಿತಿ ಪ್ರಕಾರ ಛಾವಣಿ ಸ್ಥಳದಲ್ಲೇ ಐದು ಜನರು ಅಸುನೀಗಿದರು. ಮತ್ತೊಬ್ಬ ಗಾಯಾಳು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ರಕ್ಷಣಾ ಸಚಿವ ಅಸ್ಟುಡಿಲ್ಲೋ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಗಾಯಾಳುಗಳ ಪೈಕಿ 30 ಜನರನ್ನು ಮನೆಗೆ ಕಳುಹಿಸಲಾಗಿದ್ದು ಇನ್ನೂ 48 ಮಂದಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದಿರುವ ಸಚಿವರು ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.
ಈ ನಡುವೆ ಟ್ರುಜಿಲ್ಲೋದ ಮೇಯರ್ ಮಾರಿಯೊ ರೀನಆ ಅವರು ಈ ಶಾಪಿಂಗ್ ಮಾಲ್ ಅನ್ನು ತೀವ್ರ ಅಪಾಯಕಾರಿ ಎಂದು ಪರಿಗಣಿಸಿ ಬಂದ್ ಮಾಡಿಸಿದ್ದಾರೆ ಮತ್ತು ಸರ್ಕಾರವು ಇತರ ವಾಣಿಜ್ಯ ಮಳಿಗೆಗಳ ಪರಿವೀಕ್ಷಣೆ ನಡೆಸುವುದು ಎಂದು ಪ್ರಕಟಿಸಿದ್ದಾರೆ.