Monday, February 24, 2025
Homeರಾಜ್ಯಔಷಧಿ ಕಂಪನಿಗಳು ಗುಣಮಟ್ಟ ಕಾಯ್ದುಕೊಳ್ಳಬೇಕು : ಸಚಿವ ದಿನೇಶ್ ಗುಂಡೂರಾವ್

ಔಷಧಿ ಕಂಪನಿಗಳು ಗುಣಮಟ್ಟ ಕಾಯ್ದುಕೊಳ್ಳಬೇಕು : ಸಚಿವ ದಿನೇಶ್ ಗುಂಡೂರಾವ್

Pharmaceutical companies should maintain quality: Minister Dinesh Gundurao

ಬೆಂಗಳೂರು, ಫೆ.24- ಕಳಪೆ ಗುಣಮಟ್ಟದ ಔಷಧಿಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುವ ಜೊತೆಗೆ ಜೀವ ಅಪಾಯವಾಗುವ ಸಾಧ್ಯತೆ ಇರುವುದರಿಂದ ಔಷಧಿ ಕಂಪನಿಗಳು ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಪೆ ಔಷಧಿಗಳ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರಸರ್ಕಾರಕ್ಕೆ ತಾವು ಪತ್ರ ಬರೆದು ಔಷಧಿಗಳ ಗುಣಮಟ್ಟದ ಬಗ್ಗೆ ಗಮನ ಸೆಳೆದಿದ್ದೆ. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕಾದ ವಿಚಾರ, ರಾಜ್ಯದ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದಾಗ ಕೆಲವು ಔಷಧಿಗಳಲ್ಲಿ ಕಳಪೆ ಗುಣಮಟ್ಟ ಕಂಡುಬಂದಿದೆ. ಅದನ್ನು ಬೇರೆ ರಾಜ್ಯಗಳಿಗೂ ತಿಳಿಸುವುದು ನಮ್ಮ ಪತ್ರದ ಉದ್ದೇಶವಾಗಿತ್ತು.

ಕೆಲವು ಕಂಪನಿಗಳು ಗುಣಮಟ್ಟದ ಔಷಧಿಗಳನ್ನು ಪೂರೈಸುತ್ತವೆ. ಇನ್ನೂ ಕೆಲವು ಕಂಪನಿಗಳು ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ, ಅಂತಹ ಔಷಧಿಗಳನ್ನು ಈಗಾಗಲೇ ನಿಷೇಧ ಮಾಡಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಬಾಣಂತಿಯರ ಸಾವಿಗೆ ಕಾರಣವಾದ ಐವಿ ದ್ರಾವಣ ತಯಾರಿಸಿದ ಪಶ್ಚಿಮ ಬಂಗಾಳದ ಕಂಪನಿ ಮುಚ್ಚಿದೆ.

ಅವರು ಹಲವು ಬಗೆಯ ಔಷಧಿಗಳನ್ನು ತಯಾರಿಸುತ್ತಿದ್ದರು. ನಮ್ಮ ಅಧಿಕಾರಿಗಳ ತಂಡ ಅಲ್ಲಿಗೆ ತೆರಳ ಪರಿಶೀಲನೆ ನಡೆಸಿದಾಗ ಈಗ ಉತ್ಪಾದನೆಯನ್ನು ಸ್ಥಗಿತಗೊಳಿಸುವುದು ಸ್ಪಷ್ಟವಾಗಿದೆ ಎಂದರು.

ಕೋವಿಡ್ ಹಗರಣದ ವಿಚಾರವಾಗಿ ನ್ಯಾಯಮೂರ್ತಿ ಜಸ್ಟೀಸ್ ಮೈಕಲ್ ಕುನ್ನ ಅವರ ಸಮಿತಿ ವರದಿ ನೀಡಿತ್ತು. ಅದರ ಆಧಾರದ ಮೇಲೆ ಕೆಲವು ಕಂಪನಿಗಳಿಗೆ ಹಾಗೂ ತಪ್ಪಿತಸ್ಥರಿಗೆ ನೋಟಿಸ್ ನೀಡಲಾಗಿತ್ತು. ಕೋವಿಡ್ ಹಗರಣದ ಕುರಿತಂತೆ ಏಕಾಏಕಿ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಕಾನೂನು ರೀತಿ ಮುನ್ನಡೆಯಬೇಕಾಗುತ್ತದೆ. ಈ ಕಾರಣಕ್ಕೆ ಇಲಾಖೆಯಿಂದ ಹಾಗೂ ಸಿಐಡಿಯಿಂದ ತನಿಖೆ ನಡೆಯುತ್ತಿದೆ. ಆ ಸಂದರ್ಭದಲ್ಲಿ ಸಾಕಷ್ಟು ವ್ಯವಹಾರಗಳು ಸಂಶಯಾಸ್ಪದವಾಗಿವೆ. ಎಲ್ಲವನ್ನೂ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಲಿದೆ. ಪಂಚಖಾತ್ರಿಗಳು ಯಾವುದೇ ಸಮಸ್ಯೆ ಇಲ್ಲದೆ ಮುಂದುವರೆಯುತ್ತದೆ. ಎಲ್ಲಾ ವಿಚಾರಗಳಿಗೂ ಗ್ಯಾರಂಟಿ ಯೋಜನೆಯನ್ನೇ ಥಳಕು ಹಾಕುವುದು ಸರಿಯಲ್ಲ ಎಂದರು.

ರಾಜ್ಯಸರ್ಕಾರ ಪರಿಶಿಷ್ಟ ಜಾತಿ/ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಬಿಜೆಪಿಯ ಆರೋಪ ಅರ್ಥಹೀನ, ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಮುಟ್ಟುತ್ತಿವೆ. ಎಸ್‌ಸಿ/ಎಸ್‌ಟಿ, ಓಬಿಸಿ ಸಮುದಾಯಕ್ಕೂ ತಲುಪುತ್ತಿದೆ. ಅವರ ಅಭಿವೃದ್ಧಿಗೆ ಆ ಹಣ ಬಳಸುವುದು ತಪ್ಪಲ್ಲ ಎಂದು ಹೇಳಿದರು.

ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಬಳಿ ಗುಂಪು ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರುವುದು ರಾಜಕೀಯ ಕಾರಣಕ್ಕೆ. ತಪ್ಪು ಮಾಡಿದವರ ವಿರುದ್ಧ ಈಗಾಗಲೇ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಬಿಜೆಪಿ ಸರ್ಕಾರವಿದ್ದಾಗ ಯಾವ ರೀತಿಯಾಗಿತ್ತು ಎಂದು ನಾವು ನೋಡಿದ್ದೇವೆ ಎಂದರು.

ಕುಂಭಮೇಳದಲ್ಲಿ ಕಾಲ್ತುಳಿತವಾಯಿತು. ದೆಹಲಿಯ ರೈಲ್ವೆ ಸ್ಟೇಷನ್‌ನಲ್ಲಿ ದುರ್ಘಟನೆಯಾಗಿ ಜನ ಸಾವನ್ನಪ್ಪಿದ್ದರು. ಆದರೆ ಅದನ್ನು ದೊಡ್ಡ ವಿಚಾರ ಮಾಡಲಿಲ್ಲ, ಮೈಸೂರಿನ ಉದಯಗಿರಿ ಘಟನೆಯನ್ನು ರಾಜಕೀಯಕ್ಕೆ ಬಳಸಿ ವಿವಾದ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮಹಾಶಿವರಾತ್ರಿ ಅಂಗವಾಗಿ ಜಾಣ-ಜಾಣೆಯರ ನಗೆ ಜಾಗರಣೆ ಕಾರ್ಯಕ್ರಮವನ್ನು ಫೆ.26 ರಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ತುಳಸಿತೋಟದಲ್ಲಿ ಆಯೋಜಿಸಲಾಗಿದೆ. ಕಲಾವಿದರಾದ ಎಂ.ಎಸ್.ನರಸಿಂಹಮೂರ್ತಿ, ಮಿಮಿಕ್ರಿ ದಯಾನಂದ ಗೋಪಿ, ಆಶಾ ನಾಯಕ್ ಮತ್ತಿತರರು ಪಾಲ್ಗೊಳ್ಳುತ್ತಿದ್ದಾರೆ. ಈ ಬಾರಿ ಅಂಬಾರಿ ಉತ್ಸವವನ್ನು ನಡೆಸಲಾಗುವುದು, ಆನಂದ ಗುರೂಜಿ, ಅಘೋರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ತಮ್ಮ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಕಾರ್ಯಕ್ರಮ ಆಯೋಜಿಸುವುದು ಮೊದಲಿನಿಂದಲೂ ನಡೆದುಬಂದಿದೆ. ಇದು ಮೃದು ಹಿಂದುತ್ವ ಎಂಬ ವ್ಯಾಖ್ಯಾನ ಸರಿ ಅಲ್ಲ, ಧಾರ್ಮಿಕ ಕಾರ್ಯಕ್ರಮಗಳಿಗೆ ರಾಜಕೀಯ ಸಂಬಂಧ ಕಲ್ಪಿಸುವುದು ಒಳ್ಳೆಯದಲ್ಲ. ನಾನು ಬಹಳಷ್ಟು ದೇವಸ್ಥಾನಗಳನ್ನು ನಿರ್ಮಿಸಿದ್ದೇನೆ ಎಂದು ಹೇಳಿದರು.

RELATED ARTICLES

Latest News