ಬೆಂಗಳೂರು,ಫೆ.24– ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕೆಲವು ದುಷ್ಕರ್ಮಿಗಳು ನಡೆಸಿದ್ದ ದಾಳಿ ಪ್ರಕರಣವನ್ನು ಖಂಡಿಸಿ ವಿವಿಧ ಸಂಘಟನೆಗಳು ನಡೆಸಲು ಉದ್ದೇಶಿಸಿದ್ದ ಜಾಗೃತಿ ಜನಾಂದೋಲನ ಜಾಥಾಕ್ಕೆ ಹೈಕೋರ್ಟ್ ಷರತ್ತು ಬದ್ದ ಅನುಮತಿ ನೀಡಿದೆ.
ಸಾರ್ವಜನಿಕರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಮೈಸೂರುನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಾ ಲಾಟ್ಕರ್ ಹೊರಡಿಸಿದ್ದ ನಿಷೇಧಾಜ್ಞೆಯನ್ನು ಪ್ರಶ್ನಿಸಿ ಹಿಂದೂಪರ ಸಂಘಟನೆಗಳ ಪರವಾಗಿ ಬಿಜೆಪಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಆರ್.ದೇವರಾಜ್ ಅವರು ಕೆಲವು ಷರತ್ತುಗಳನ್ನು ವಿಧಿಸಿ ಜಾಥಾಕ್ಕೆ ಅನುಮತಿ ನೀಡಿತು.
ಯಾವುದೇ ಕಾರಣಕ್ಕೂ ಪ್ರಚೋದನಾಕಾರಿ ಭಾಷಣ ಮಾಡಬಾರದು.
ಅರ್ಜಿದಾರರು ಒಂದು ಲಕ್ಷ ಬಾಂಡ್ ನ್ಯೂರಿಟಿ ನೀಡುವುದು, ಜಾಥಾವನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡುವುದು, ಶಾಂತಿಯುತವಾಗಿ ಜಾಥ ನಡೆಸುವುದು, ಮೈಸೂರಿನ ಫುಟ್ಬಾಲ್ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3.30ರಿಂದ ಜಾಥಾ ಆರಂಭಿಸುವಂತೆ ಜಾಥಾ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು.
ಒಂದು ವೇಳೆ ಹೈಕೋರ್ಟ್ ನೀಡಿರುವ ಷರತ್ತುಗಳನ್ನು ಉಲ್ಲಂಘನೆ ಮಾಡಿದರೆ ಅದಕ್ಕೆ ನೇರವಾಗಿ ಅರ್ಜಿದಾರರೇ ಕಾರಣರಾಗುತ್ತಾರೆ ಎಂದು ಎಚ್ಚರಿಕೆ ಕೊಟ್ಟಿದೆ.
ನಿಷೇಧಾಜ್ಞೆಯನ್ನು ಮಧ್ಯಾಹ್ನ 3.30ರ ನಂತರ ಸಡಿಲಿಸಿ ಸಂಘಟನೆಗಳಿಗೆ ಅವಕಾಶ ಕೊಡಬೇಕು.
ಸಾರ್ವಜನಿಕರ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಾರದು. ಜಾಥಾ ನಡೆಯುವ ವೇಳೆ ಸ್ಥಳದಲ್ಲಿ ನಗರ ಪೊಲೀಸ್ ಆಯುಕ್ತರು ಸೇರಿದಂತೆ ಮತ್ತಿತರರು ಕಡ್ಡಾಯವಾಗಿ ಹಾಜರಿರಬೇಕೆಂದು ನಿರ್ದೇಶನ ನೀಡಿತು.