ಬೆಂಗಳೂರು,ಫೆ.24- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಆಡಳಿತಾತ್ಮಕ ದೃಷ್ಟಿಯಿಂದ ಪುನಾರಚನೆ ಮಾಡಿ ಸಣ್ಣ ಸಣ್ಣ ಪಾಲಿಕೆಗಳನ್ನಾಗಿ ಮಾಡಲು 2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಸಮಗ್ರವಾಗಿ ಪರಿಶೀಲಿಸಿ ವರದಿ ನೀಡಲು ರಚಿತವಾಗಿದ್ದ ಕರ್ನಾಟಕ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿ ಶಿಫಾರಸ್ಸು ಮಾಡಿದೆ.
ವಿಧಾನಸೌಧದಲ್ಲಿಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ, ಸಮಿತಿಯ ಅಧ್ಯಕ್ಷರಾದ ಶಾಸಕ ರಿಜ್ವಾನ್ ಅರ್ಷದ್, ಸದಸ್ಯರಾದ ಎಸ್.ಟಿ.ಸೋಮಶೇಖರ್, ಪ್ರಿಯಾಕೃಷ್ಣ, ಆನೇಕಲ್ ಶಿವಣ್ಣ, ಶ್ರೀನಿವಾಸ್, ಜವರಾಯಿಗೌಡ ಅವರು ವರದಿ ಸಲ್ಲಿಸಿದರು.
ವರದಿ ಸಲ್ಲಿಕೆ ನಂತರ ಮಾತನಾಡಿದ ರಿಜ್ವಾನ್ ಅರ್ಷದ್, ಬಿಬಿಎಂಪಿಯನ್ನು ಏಳು ಸಣ್ಣ ಸಣ್ಣಪಾಲಿಕೆಯಾಗಿ ಆಡಳಿತ ದೃಷ್ಟಿಯಿಂದ ವಿಭಜನೆ ಮಾಡಲು ಅವಕಾಶ ಕಲ್ಪಿಸಿ ಶಿಫಾರಸ್ಸು ಮಾಡಲಾಗಿದೆ.
ಎಷ್ಟು ಪಾಲಿಕೆ ಮಾಡಬೇಕೆಂಬುದು ಸರ್ಕಾರಕ್ಕೆ ಬಿಟ್ಟ ವಿಷಯ. ಈಗ ಬಿಬಿಎಂಪಿ ಆಡಳಿತ ವೈಖರಿಯಿಂದ ತೃಪ್ತಿಯಾಗಿಲ್ಲ, ಅಲ್ಲದೆ ಬೆಸ್ಕಾಂ, ಬಿಡಬ್ಲ್ಯುಎಸ್ ಎಸ್ ಬಿ ಮೊದಲಾದ ಸಂಸ್ಥೆಗಳ ನಡುವೆ ಸಮನ್ವಯತೆ ಇಲ್ಲ, ಹೀಗಾಗಿ ಗ್ರೇಟರ್ ಬೆಂಗಳೂರು ಅಥಾರಿಟಿ ಅಸ್ತಿತ್ವಕ್ಕೆ ತರಲು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರು ಮುಖ್ಯಮಂತ್ರಿಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಬೆಂಗಳೂರು ಉಸ್ತುವಾರಿ ಇರುತ್ತಾರೆ ಎಂದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬೆಸ್ಕಾಂ, ಬಿಡಬ್ಲ್ಯುಎಸ್‌ಎಸ್ಎಸ್‌ಬಿ, ಮೆಟ್ರೋ ರೈಲು ಮೊದಲಾದ ಸಂಸ್ಥೆಗಳ ನಡುವೆ ಸಮನ್ವಯತೆ ಸಾಧಿಸಲಿದೆ. ಪ್ರತಿ ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತದೆ. ಮೂರು ತಿಂಗಳಿಗೊಮ್ಮೆ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಸಲಹೆ ಮಾಡಲಾಗಿದೆ.
ಬಿಬಿಎಂಪಿಗೆ ಹೊಸ ರೂಪ ನೀಡಬೇಕಾಗಿದ್ದು, ಹೊಸದಾಗಿ ಅಸ್ತಿತ್ವಕ್ಕೆ ಬರುವ ಪ್ರತಿ ಪಾಲಿಕೆಗಳಿಗೆ 100ರಿಂದ 125 ವಾರ್ಡ್‌ಗಳಿರಬೇಕು. ಮೇಯರ್ ಅವಧಿ 30 ತಿಂಗಳ ಅವಧಿ ಇರಬೇಕು ಎಂಬ ಶಿಫಾರಸ್ಸು ಮಾಡಲಾಗಿದೆ.
ಬಿಬಿಎಂಪಿ ವಿಭಜನೆಯಾದರೂ ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ ಈ ರೀತಿಯೇ ಇರಬೇಕೆಂಬ ಶಿಫಾರಸ್ಸಿದೆ. ಬೇರೆ ಜಿಲ್ಲೆಯನ್ನು ಸೇರಿಸುವುದಿಲ್ಲ, ಕೆಎಂಸಿ ಕಾಯ್ದೆ ಪ್ರಕಾರ ಹೊಸ ಪಾಲಿಕೆ ರಚನೆಯಾಗುತ್ತದೆ. ಪಾಲಿಕೆ ಹತ್ತಿರದಲ್ಲಿರುವ ಗ್ರಾಮಗಳನ್ನು ಸೇರಿಸಲು ಅವಕಾಶವಿರುತ್ತದೆ ಎಂದು ಹೇಳಿದರು.
ಆಗಸ್ಟ್‌ನೊಳಗೆ ಚುನಾವಣೆ:
ಜೂ.30ರೊಳಗೆ ವಾರ್ಡ್‌ಗಳ ಗಡಿ ಗುರುತಿಸಬೇಕಿದೆ. ಅಷ್ಟರೊಳಗೆ ಹೊಸ ಪಾಲಿಕೆ, ವಾರ್ಡ್‌ಗಳು ರಚನೆ ಆಗಬೇಕು. ಬಳಿಕ ಮೀಸಲಾತಿ ನಿಗದಿಯಾಗಬೇಕು. ಇಷ್ಟೆಲ್ಲ ಕ್ರಿಯೆಗಳು ಪೂರ್ಣಗೊಂಡರೆ ಜುಲೈನಲ್ಲಿ ಪಾಲಿಕೆ ಚುನಾವಣೆ ನಡೆಯಬಹುದು. ಒಂದು ವೇಳೆ ಹೊಸ ಪಾಲಿಕೆಗೆ ಸರ್ಕಾರ ಅನುದಾನ ನೀಡಬೇಕೆಂಬ ಶಿಫಾರಸ್ಸು ಮಾಡಲಾಗಿದೆ.
ಪ್ರಸ್ತುತ 877 ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಜನಸಂಖ್ಯೆ ಇದೆ. ವೇಗವಾಗಿ ಬೆಳೆಯುತ್ತಿರುವ ನಗರ ಇದಾಗಿದೆ.ಹೀಗಾಗಿ ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಗತ್ಯವಿದೆ ಎಂದರು.
ಜಂಟಿ ಪರಿಶೀಲನಾ ಸಮಿತಿಯು 20 ಅಧಿಕೃತ ಸಭೆಗಳನ್ನು ನಡೆಸಿದೆ. ಬ್ರಾಂಡ್ ಬೆಂಗಳೂರು ಸಮಿತಿಯ ಜೊತೆ ಸಮಾಲೋಚನೆ ನಡೆಸಿದೆ. ಅರು ವಲಯಗಳಲ್ಲಿ ಸಭೆ ಮಾಡಿ ಸಾರ್ವಜನಿಕರ ಸಲಹೆ ಪಡೆಯಲಾಗಿದೆ. ಕಳೆದ 5 ತಿಂಗಳಿನಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಕಾನೂನು ತಜ್ಞರೊಂದಿಗೂ ಸಮಾಲೋಚನೆ ನಡೆಸಿ ಕಾಳಜಿಯುಳ್ಳ ಸಂಘಸಂಸ್ಥೆಗಳ ಜೊತೆಯೂ ಚರ್ಚಿಸಲಾಗಿದೆ. ಆನ್‌ಲೈನ್ ಮೂಲಕ ಅಭಿಪ್ರಾಯ ಪಡೆಯಲಾಗಿದೆ. ಸಮಗ್ರವಾಗಿ ವಿಧೇಯಕವನ್ನು ರೂಪಿಸಲಾಗಿದೆ. ಮುಂದಿನ ವಾರ ಆರಂಭವಾಗುವ ಅಧಿವೇಶನದಲ್ಲಿ ಚರ್ಚೆಗೆ ಈ ವಿಧೇಯಕ ಬರಲಿದೆ.
ಬೆಂಗಳೂರಿನಲ್ಲಿ ಮುಂಚೂಣೀಯ 400ಕ್ಕೂ ಹೆಚ್ಚು ಕಂಪನಿಗಳು, ಸಾರ್ಟಪ್‌ಗಳು, ಐಟಿ ಕಂಪನಿಗಳು ಇವೆ. ಭಾರತದ ಆರ್ಥಿಕತೆಗೆ ಬೆಂಗಳೂರು ನಗರ ಕೊಡುಗೆ ನೀಡುತ್ತಿದೆ. ನಗರಕ್ಕೆ ಮೂಲಸೌಲಭ್ಯ, ಉತ್ತಮ ಆಡಳಿತದ ಅಗತ್ಯವಿದ್ದು, ಪರ್ಯಾಯ ವ್ಯವಸ್ಥೆ ಆಗಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ವಿಧೇಯಕವನ್ನು ತಂದಿದೆ ಎಂದರು.