ಬೆಳಗಾವಿ, ಫೆ. 25: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾವು ನಿನ್ನೆಯಿಂದ ಮಹಾರಾಷ್ಟ್ರಕ್ಕೆ ಬಸ್ ಸೇವೆಗಳನ್ನು ಸ್ಥಗಿತಗೊಳಿಸಿದ್ದೇವೆ.
ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ (ಎಂಎಸ್‌ಆರ್‌ಟಿಸಿ) ಕೂಡ ಕರ್ನಾಟಕಕ್ಕೆ ಬಸ್‌ಗಳ ಸಂಚಾರವನ್ನು ನಿಲ್ಲಿಸಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ವಿವರಿಸಿದರು. ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ (ಕೆಆರ್ವಿ) ಇಂದು ಬೆಳಗಾವಿ ಚಲೋ ಗೆ ಕರೆ ನೀಡಿದೆ. ಬೆಳಗಾವಿಯಲ್ಲಿ ಮೆರವಣಿಗೆ ನಡೆಸಿ, ಪ್ರತಿಭಟನೆ ನಡೆಸಿ ಸಾರ್ವಜನಿಕ ಸಭೆ ನಡೆಸಲು ನಿರ್ಧರಿಸಲಾಗಿದೆ.
ಬೆಳಗಾವಿಯಲ್ಲಿ ಪ್ರಯಾಣಿಕರೊಂದಿಗೆ ಮರಾಠಿಯಲ್ಲಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಜನರ ಗುಂಪೊಂದು ಕೆಎಸ್‌ಆರ್ಟಿಸಿ ಬಸ್ಸ ನ್ನು ತಡೆದು ಕಂಡಕ್ಟರ್ ಮತ್ತು ಚಾಲಕನನ್ನು ಥಳಿಸಿದ ನಂತರ ಭಾಷೆಯ ವಿವಾದ ಪ್ರಾರಂಭವಾಗಿದೆ.
ಮರಾಠಿ ಭಾಷಾಂಧರ ವಿರುದ್ದ ಆಕ್ರೋಶ :
ಮಹಾರಾಷ್ಟ್ರದ ಬಸ್‌ಗೆ ಕನ್ನಡ ಬಾವುಟ ಕಟ್ಟಿ ಜೈ ಘೋಷ ಕೂಗಿ ಮರಾಠಿ ಭಾಷಾಂಧರ ವಿರುದ್ದ ಕನ್ನಡ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಚಿತ್ರದುರ್ಗ- ಸೋಲಾಪುರ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಈ ಘಟನೆ ನಡೆದಿದೆ. ಬಸ್‌ನ್ನು ಕೂಡಲಸಂಗಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದ ಬಾಗಲಕೋಟೆ ಜನರು, ಬಸ್ ಮುಂಭಾಗದ ಗಾಜಿನ ಮೇಲೆ ಜೈ ಕರ್ನಾಟಕ ಎಂದು ಬರೆದಿದ್ದಾರೆ. ಅಲ್ಲದೇ, ಚಾಲಕನಿಗೆ ಕನ್ನಡ ಧ್ವಜ ಹಿಡಿಸಿ, ಜೈ ಕರ್ನಾಟಕ ಎಂದು ಘೋಷಣೆ ಹಾಕಿಸಿದ್ದಾರೆ ಮರಾಠಿ ಭಾಷಾಂಧರ ಗೂಂಡಾ ವರ್ತನೆಗೆ ಬಾಗಲಕೋಟೆ ಜನರು ತಿರುಗೇಟು ನೀಡಿದ್ದಾರೆ .