ಬೆಂಗಳೂರು,ಫೆ.25- ರಾಜಕೀಯ ವೈಷಮ್ಯದ ಹಿನ್ನಲೆಯಲ್ಲಿ ರೌಡಿ ಹೈದರಾಲಿ ಕೊಲೆಯಾಗಿದೆ ಎಂದು ಶಂಕಿಸಿರುವ ಆಶೋಕನಗರ ಠಾಣೆ ಪೊಲೀಸರು ಈ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಆನೇಪಾಳ್ಯ ನಿವಾಸಿ ಹೈದರಾಲಿ(32) ಅಶೋಕನಗರ ರೌಡಿಶೀಟರ್. ಈತ ಶನಿವಾರ ರಾತ್ರಿ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ಸ್ನೇಹಿತನ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಮಧ್ಯರಾತ್ರಿ 1.15ರ ಸುಮಾರಿನಲ್ಲಿ ಫುಟ್ಬಾಲ್ ಸ್ಟೇಡಿಯಂ ಬಳಿ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಇವರ ಬೈಕ್‌ಗೆ ಕಾರಿನಿಂದ ಡಿಕ್ಕಿ ಹೊಡೆಸಿ ಕೆಳಗೆ ಬೀಳಿಸಿದ್ದರು.
ಅದೇ ವೇಳೆಗೆ ಏಕಾಏಕಿ ಎಂಟತ್ತು ಮಂದಿಯ ಗುಂಪು ಹೈದರಾಲಿ ಮೇಲೆ ಮಚ್ಚು ಲಾಂಗ್‌ಗಳಿಂದ ದಾಳಿ ಮಾಡಿ ಕಿವಿ, ತಲೆ, ಕೈಕಾಲು ಸೇರಿದಂತೆ 50ಕ್ಕೂ ಹೆಚ್ಚು ಕಡೆ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಅಶೋಕನಗರ ಠಾಣೆ ಪೊಲೀಸರು ಆರೋಪಿಗಳ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಂಡು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಹೈದರಾಲಿ ಅಣ್ಣ ಕಾಂಗ್ರೆಸ್ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕರ್ತರು. ಮುಂದಿನ ದಿನಗಳಲ್ಲಿ ಮಹಾನಗರ ಪಾಲಿಕೆ ಚುನಾವಣೆ ಬರಲಿದ್ದು, ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಗೆ ಸಜ್ಜಾಗಿ ಎಂದು ಮುಖಂಡರು ಸೂಚಿಸಿದ ಹಿನ್ನಲೆಯಲ್ಲಿ ರಾಜಕೀಯ ವೈಷಮ್ಯದಿಂದ ಈ ಕೊಲೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ರೌಡಿ ಕೊಲೆ ಪ್ರಕರಣ ಸಂಬಂಧ ಉಳಿದ ಆರೋಪಿಗಳಿಗಾಗಿ ತನಿಖೆ ಮುಂದುವರೆದಿದೆ. ಶೀಘ್ರ ಆರೋಪಿಗಳ ಬಂಧನ: ಕೊಲೆ ಆರೋಪಿಗಳ ಸುಳಿವು ಸಿಕ್ಕಿದ್ದು, ಆದಷ್ಟು ಬೇಗ ಅವರನ್ನು ಬಂಧಿಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೇ ದ್ವೇಷದ ಹಿನ್ನಲೆಯಲ್ಲಿ ಹೈದರಾಲಿ ಕೊಲೆಯಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಕೆಲವು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಎಲ್ಲಾ ಆರೋಪಿಗಳನ್ನು ಬಂಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ವಿವರಗಳನ್ನು ಸದ್ಯಕ್ಕೆ ನೀಡಲಾಗುವುದಿಲ್ಲ ಎಂದು ಹೇಳಿದರು.