ಬೀದರ್, ಫೆ.25- ಕೊಡಗು, ಹಾಸನ, ಚಿಕ್ಕಮಗಳೂರು ಸುತ್ತಮುತ್ತ ಕಾಡಿನಿಂದ ಹೊರಬಂದು ಗುಂಪಾಗಿ ಸಂಚರಿಸುವ ಕೆಲವು ಆನೆಗಳಿಂದ ಸಮಸ್ಯೆ ಹೆಚ್ಚಾಗಿದ್ದು, 2ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭದ್ರಾ ಅಭಯಾರಣ್ಯದಲ್ಲಿ ಆನೆ ಧಾಮ ನಿರ್ಮಿಸಲು ಯೋಜಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.
ಆನೆ ಧಾಮದಲ್ಲಿ ಆನೆಗಳಿಗೆ ಅಗತ್ಯ ಆಹಾರ, ನೀರು ಲಭ್ಯವಾಗುವಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಕಾಡಿನ ಹೊರಗೇ ಓಡಾಡುವ 150ಕ್ಕೂ ಹೆಚ್ಚು ಆನೆಗಳನ್ನು ಗುರುತಿಸಲಾಗಿದ್ದು, ಮಿನಿ ಖೆಡ್ಡಾ ಕಾರ್ಯಾಚರಣೆ ರೂಪದಲ್ಲಿ ಆನೆಗಳನ್ನು ಧಾಮಕ್ಕೆ ಕಳುಹಿಸಬೇಕಾಗುತ್ತದೆ. ಆದರೆ ಇದಕ್ಕೆ ಕಾಲಾವಕಾಶ ಬೇಕಾಗುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿನ್ನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ಒಬ್ಬ ಯುವಕ ಮತ್ತು ಇಂದು ಕೋಲಾರ ಜಿಲ್ಲೆ ಕಾನಸಮುದ್ರದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ತೀವ್ರ ನೋವು ತಂದಿದೆ. ಮೃತರ ಕುಟುಂಬದೊಂದಿಗೆ ಸರ್ಕಾರ ಇದೆ. ಅವರ ನೋವಿನಲ್ಲಿ ನಾವೂ ಭಾಗಿಯಾಗಿದ್ದೇವೆ ಎಂದು ಹೇಳಿದ್ದಾರೆ.
ಮೃತರ ಹತ್ತಿರದ ಸಂಬಂಧಿಕರಿಗೆ ಕೂಡಲೇ ಪರಿಹಾರದ ಮೊತ್ತ ನೀಡಲು ಸೂಚಿಸಲಾಗಿದೆ. ಈ ಎಲ್ಲ ದುರ್ಘಟನೆಗಳು ಬೆಳಗಿನ ಮತ್ತು ಸಂಜೆಯ ವೇಳೆ ಸಂಭವಿಸುತ್ತಿವೆ. ಕಾಡಿನಂಚಿನ ಜನರು ಅರಣ್ಯ ಇಲಾಖೆಯು ಆನೆಗಳ ಚಲನವಲನದ ಬಗ್ಗೆ ನೀಡುವ ಸಂದೇಶಕ್ಕೆ ಸ್ಪಂದಿಸಿ, ಜಾಗರೂಕರಾಗಿರಬೇಕು ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.
203 ಕಿ.ಮೀ. ರೈಲ್ವೆ ಬ್ಯಾರಿಕೇಡ್: ರಾಜ್ಯ ಸರ್ಕಾರ ವನ್ಯಜೀವಿ- ಮಾನವ ಸಂಘರ್ಷ ನಿಯಂತ್ರಿಸಲು ಟೆಂಟಕಲ್ ಫೆನ್ಸಿಂಗ್, ಸೌರ ಬೇಲಿ, ಆನೆ ಕಂದಕ ನಿರ್ಮಿಸಿ, ನಿರ್ವಹಿಸುತ್ತಿರುವುದರ ಜೊತೆಗೆ ರೈಲ್ವೆ ಬ್ಯಾರಿಕೇಡ್ ಸಹ ಹಾಕುತ್ತಿದೆ. 2024-25ನೇ ಸಾಲಿನಲ್ಲಿ 78.917 ಕಿ.ಮೀ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಂಡಿದ್ದು, 41.87 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ.
ಇನ್ನೂ 103 ಕಿ.ಮೀ. ಗುರಿ ನಿಗದಿ ಮಾಡಲಾಗಿದ್ದು, ಮಾರ್ಚ್ 31ರೊಳಗೆ ಈ ಕಾಮಗಾರಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.ದೇಶದಲ್ಲಿಯೇ ಅತಿ ಹೆಚ್ಚು 6395 ಆನೆಗಳು ರಾಜ್ಯದಲ್ಲಿವೆ, ಸರ್ಕಾರ ಪುಂಡಾನೆ ಹಾವಳಿ ತಡೆಗೆ ಮಾರ್ಗೋಪಾಯ ಕಂಡುಹಿಡಿಯಲು ನೆರೆ ರಾಜ್ಯಗಳ ಸಚಿವರೊಂದಿಗೆ ಸಭೆ ಮತ್ತು ಅಂತಾರಾಷ್ಟ್ರೀಯ ಸಮಾವೇಶ ನಡೆಸಿದೆ.
ತಜ್ಞರ ಸಮಿತಿ ರಚಿಸಿ ಅಧ್ಯಯನ ನಡೆಸುತ್ತಿದೆ. ಆನೆ ಕಾರ್ಯಪಡೆಯನ್ನೂ ರಚಿಸಿದೆ. ಸಾರ್ವಜನಿಕರಿಗೆ ಸಕಾಲದಲ್ಲಿ ಆನೆಗಳ ಓಡಾಟದ ಬಗ್ಗೆ ಮಾಹಿತಿ ನೀಡುವ ಕಾರ್ಯ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಜನಸಂಖ್ಯೆ ಹೆಚ್ಚಿದಂತೆಲ್ಲಾ ಕಾಡಿನಂಚಿನವರೆಗೆ ವಸತಿ ಪ್ರದೇಶಗಳ ವಿಸ್ತರಣೆ ಆಗಿದೆ. ಕಾಡಿನ ಅಂಚಿನಲ್ಲೇ ಕೃಷಿ ಚಟುವಟಿಕೆ ನಡೆಯುತ್ತದೆ. ಕಾಡಿನಂಚಿನ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಸರ್ಕಾರ ಮಾಡಿದೆ. ಹೀಗಾಗಿ ಆನೆಗಳು ಬಾಳೆ, ಹಲಸು, ಭತ್ತ ಇತ್ಯಾದಿ ಫಸಲು ತಿನ್ನಲು, ನೀರು ಕುಡಿಯಲು ಊರಿಗೆ ಬರುತ್ತಿವೆ ಎಂದು ತಜ್ಞರು ಹೇಳುತ್ತಾರೆ.
ಆನೆಗಳು ನಾಡಿಗೆ ಬರಲು ಕಾರಣವೇನು ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಮಾನವ ಆನೆ ಸಂಘರ್ಷ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.