ಬೆಂಗಳೂರು, ಫೆ.26– ಸ್ನೇಹಿತನನ್ನು ಮಾತನಾಡಿಸಿಕೊಂಡು ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಜಿಮ್ ಟ್ರೈನರ್ ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ಯಶವಂತಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಿಕೆನಗರದ ಲಚ್ಚಪ್ಪ ಕಾಲೋನಿ ನಿವಾಸ ಅರುಣ್ (30) ಮೃತಪಟ್ಟ ಜಿಮ್ ಟ್ರೈನರ್. ರಾತ್ರಿ 10 ಗಂಟೆ ಸುಮಾರಿನಲ್ಲಿ ಅರುಣ್ ಸ್ನೇಹಿತನನ್ನು ನೋಡಲು ರಾಯಲ್ ಎನ್‌ಫೀಲ್ಡ್ ಬೈಕ್ ತೆಗೆದುಕೊಂಡು ಮನೆಯಿಂದ ಹೋಗಿದ್ದರು. ಸ್ನೇಹಿತನನ್ನು ಮಾತನಾಡಿಸಿಕೊಂಡು ಹೆಲೈಟ್ ಧರಿಸದೆ ಮುಂಜಾನೆ 1.15ರ ಸುಮಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದರು.
ಯಶವಂತಪುರದ ಜೆ.ಪಿ.ಪಾರ್ಕ್ ಟ್ಯಾಂಕಬಂಡ್ ರಸ್ತೆಯ ಮಂಜುನಾಥ ಇಂಟೀರಿಯಲ್ ಡೆಕೋರ್ಸ್ ಅಂಗಡಿ ಮುಂಭಾಗ ಬೈಕ್ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಸ್ವಲ್ಪದೂರ ಉಜ್ಜಿಕೊಂಡು ಹೋದ ಪರಿಣಾಮ ತಲೆ ಹಾಗೂ ಇನ್ನಿತರ ದೇಹದ ಭಾಗಗಳಿಗೆ ಗಂಭೀರ ಪೆಟ್ಟಾಗಿದೆ.
ತಕ್ಷಣ ಅವರನ್ನು ಸಾರ್ವಜನಿಕರ ಸಹಾಯದಿಂದ ಆಟೋದಲ್ಲಿ ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ರಾಯಲ್ ಎನ್‌ಫೀಲ್ಡ್ ಬೈಕ್ ಸಹ ಭಾಗಶಃ ಹಾನಿಯಾಗಿದೆ. ಸುದ್ದಿ ತಿಳಿದು ಯಶವಂತಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಅಪಘಾತಕ್ಕೆ ಅತಿವೇಗವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.