ಬೆಂಗಳೂರು, ಫೆ.26- ಮುಂದಿನ ವಿಧಾನಸಭೆ ಚುನಾವನೆಗೆ ನನ್ನದೇ ನಾಯಕತ್ವ ಎಂಬ ಹೇಳಿಕೆಯನ್ನು ಪುನರುಚ್ಚರಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಐದು ವರ್ಷ ಪಕ್ಷದ ಅಧ್ಯಕ್ಷನ್ನಾಗಿರುತ್ತೇನೆ. ಉಪಮುಖ್ಯಮಂತ್ರಿಯಾಗಿದ್ದೇನೆ. 1989ರಿಂದ ಪಕ್ಷ ನನ್ನನ್ನು ಸಚಿವರನ್ನಾಗಿ ಮಾಡಿದೆ. ಇನ್ನಾದರೂ ನಾನು ಪಕ್ಷಕ್ಕೆ ನಾಯಕತ್ವ ನೀಡದಿದ್ದರೇ ಹೇಗೆ ಎಂದು ಪ್ರಶ್ನಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದೆ. ಅನಂತರ ಪಕ್ಷದ ಅಧ್ಯಕ್ಷನಾಗಿದ್ದೆ. ಈಗ ಉಪಮುಖ್ಯಮಂತ್ರಿಯಾಗಿದ್ದೇನೆ. ಎಲ್ಲಾ ರಾಜ್ಯಗಳಿಂದಲೂ ಪ್ರಚಾರಕ್ಕೂ ನನ್ನನ್ನು ಆಹ್ವಾನಿಸುತ್ತಾರೆ. ನನಗೆ ನನ್ನದೇ ಆದ ಪ್ರಭಾವ-ನಾಯಕತ್ವ ಇದೆ. ಹೀಗಾಗಿ ಮುಂದಿನ ಚುನಾವಣೆಗೆ ನನ್ನದೇ ನಾಯಕತ್ವ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪಕ್ಷವನ್ನು ಮುನ್ನೆಡೆಸುತ್ತಾರೆ ಎಂದರು.
ನಾನು ಪಕ್ಷದ ರಾಜ್ಯ ಅಧ್ಯಕ್ಷ, ದೆಹಲಿಗೆ ಹೋದಾಗ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೇನೆ. ಕಾಂಗ್ರೆಸ್ ಕಚೇರಿ ದೇವಸ್ಥಾನ ಇದ್ದಂತೆ ಅಲ್ಲಿಗೆ ಹೋಗುತ್ತೇವೆ. ಇನ್ನೇನು ಬಿಜೆಪಿ ಕಚೇರಿಗೆ ಹೋಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ಅಲ್ಲಿ ಎಲ್ಲಾ ಹಂತದಲ್ಲೂ ಇದ್ದವರನ್ನು ಭೇಟಿ ಮಾಡುತ್ತೇನೆ. ಅದರಲ್ಲಿ ವಿಶೇಷವೇನು ಇಲ್ಲ ಎಂದರು.
ಅಧ್ಯಕ್ಷನಾಗಿ ನಾನು ಮುಂದುವರೆಯಬೇಕು ಎಂದು ಹೇಳಿರುವುದಾಗಿ ವರದಿಯಾಗಿರುವುದು ಆಧಾರ ರಹಿತ ಎಂದರು. ಈಶಾ ಪೌಂಡೇಷನ್ ಅಧ್ಯಕ್ಷರು ನನ್ನನ್ನು ಭೇಟಿ ಮಾಡಿ ಮಹಾಶಿವರಾತ್ರಿ ಆಚರಣೆಗೆ ಆಹ್ವಾನ ನೀಡಿದರು. ಅದಕ್ಕೆ ಬೇರೆ ರೀತಿಯ ವ್ಯಾಖ್ಯಾನ ಮಾಡಲಾಗಿದೆ, ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂದು ವರದಿಯಾಗಿದೆ. ನಾನಿನ್ನೂ ಅಮಿತ್ ಶಾರನ್ನೇ ಭೇಟಿಯಾಗಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.
ನಾನು ಕಾಂಗ್ರೆಸಿಗ ಎಂದಿಗೂ ಬಿಜೆಪಿಗೆ ಹತ್ತಿರವಾಗುವುದಿಲ್ಲ. ಕಾಂಗ್ರೆಸ್ ಸಿದ್ದಾಂತ ಎಲ್ಲರಿಗೂ ಹತ್ತಿರವಾಗಿದೆ. ನಾನು ಕಾಂಗ್ರೆಸಿಗನಾಗಿಯೇ ಇರುತ್ತೇನೆ ಎಂದರು.
ನಾನು ಜೈನ್ ಮಂದಿರ, ಗುರುನಾನಕ್ ಭವನ್, ದರ್ಗಾ, ಚರ್ಚೆ ಎಲ್ಲ ಕಡೆ ಭೇಟಿ ನೀಡುತ್ತೇನೆ. ನಾನು ಹಿಂದು, ಹಿಂದುವಾಗಿ ಹುಟ್ಟಿದ್ದೇನೆ, ಹಿಂದುವಾಗಿಯೇ ಸಾಯುತ್ತೇನೆ. ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ ಎಂದರು.
ಬೆಂಗಳೂರು ಕಸದ ಟೆಂಡರ್ ಇನ್ನೂ ಇತ್ಯರ್ಥ್ಯವಾಗಿಲ್ಲ, ಆಗಲೇ 15 ಸಾವಿರ ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಆರೋಪ ಕುಮಾರಸ್ವಾಮಿ ಆರೋಪ ಮಾಡಿದರೂ, ಯಾವ ಕಿಕ್ ಯಾವ ಬ್ಯಾಕ್ ಎಂದು ಲೇವಡಿ ಮಾಡಿದರು. ಭೂ ಹಗರಣದಲ್ಲಿ ಕುಮಾರಸ್ವಾಮಿಗೆ ನ್ಯಾಯಾಲಯ ಏನು ಹೇಳಿದೆ ಎಂದು ಪತ್ರಿಕೆಗಳಲ್ಲಿ ಓದಿದೆ. ಈ ವಿಚಾರವಾಗಿ ಜೆಡಿಎಸ್‌ನ ಪಾಲುದಾರ ಪಕ್ಷವಾಗಿರುವ ಬಿಜೆಪಿ ಏನು ಹೇಳುತ್ತದೆ ಎಂದು ಕಾದು ನೋಡುತ್ತಿದ್ದೇನೆ ಎಂದರು.