ಪ್ರಯಾಗರಾಜ್,ಫೆ.26– ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭ ಮೇಳವು ನಂಬಿಕೆಯ ಹರಿವಿಗೆ ಯಾವುದೇ ಅಡೆತಡೆಗಳು ಅಡ್ಡಿಯಾಗಲಾರದು ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ಸಾರಿದೆ.
ಭಾಷೆ, ಸಂಸ್ಕೃತಿ, ಆಚಾರ ವಿಚಾರ, ನಂಬಿಕೆ ಇದರಲ್ಲಿ ವೈವಿಧ್ಯತೆ ಇದ್ದರೂ ಏಕತೆಯಲ್ಲಿ ನಾವು ಭಾರತೀಯರು ಒಂದೇ ಎಂಬುದನ್ನು ಮಹಾಕುಂಭ ಮೇಳವು ಸಾರಿ ಸಾರಿ ಹೇಳಿದೆ.
ಶತಮಾನಗಳಿಂದಲೂ ಮೂರು ಪವಿತ್ರ ನದಿಗಳು ಸಂಗಮವಾಗುವ ಈ ಪ್ರಯಾಗ್‌ರಾಜ್ ಕ್ಷೇತ್ರ, 12 ಕುಂಭಮೇಳಗಳಿಗೆ ಸಾಕ್ಷಿಯಾಗಿದೆ. ಈ ಬಾರಿಯ ಮಹಾಕುಂಭದಲ್ಲಿ ನೆರೆದ ಜನರನ್ನು ನೋಡಿದರೆ 144 ವರ್ಷಗಳ ಹಿಂದಿನ ನೆನಪುಗಳು ಹಚ್ಚ ಹಸಿರಾಗಿವೆ. ಜಾತಿ-ಮತಗಳನ್ನು ಮರೆತು ಒಂದೇ ನದಿಯಲ್ಲಿ ಒಟ್ಟಾಗಿ ಸ್ನಾನ ಮಾಡಿದ ಈ ದೃಶ್ಯ, ಇಡೀ ಜಗತ್ತಿಗೆ ಏಕತೆಯ ಸಂದೇಶ ನೀಡಿದೆ.
ಪ್ರಯಾಗರಾಜ್‌ನಲ್ಲಿ ನಡೆದ ಮಹಾ ಕುಂಭಮೇಳವು ನಂಬಿಕೆಗೆ ಅದ್ಭುತ ನಿದರ್ಶನವಾಗಿತ್ತು. 63 ಕೋಟಿಗೂ ಹೆಚ್ಚು ಜನರು ಇಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಕೆಲವು ಸುಳ್ಳು ಸುದ್ದಿಗಳು ಹಬ್ಬಿದರೂ, ಜನರ ನಂಬಿಕೆ ಮಾತ್ರ ಕುಂದಲಿಲ್ಲ. ಫೆಬ್ರವರಿ 26ರ ಮಹಾಶಿವರಾತ್ರಿಯಂದು ಮಹಾಕುಂಭ ಮೇಳಕ್ಕೆ ತೆರೆ ಬೀಳುತ್ತಿದ್ದು, ಈ ಪುಣ್ಯ ಸ್ಥಳದಲ್ಲಿ ನೆರೆದ ಜನಸಾಗರ ಜಗತ್ತಿಗೆ ಸ್ಪಷ್ಟ ಸಂದೇಶ ನೀಡಿದೆ.
ಇತ್ತೀಚೆಗೆ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಕೂಡ ತಮ್ಮ ಕುಟುಂಬ ಸಮೇತ ಸಂಗಮದಲ್ಲಿ ಸ್ನಾನ ಮಾಡಿ, ರಾಜ್ಯದ ಜನರಿಗೆ ಸುಖ-ಶಾಂತಿ, ಸಮೃದ್ಧಿ ನೀಡುವಂತೆ ಪ್ರಾರ್ಥಿಸಿದರು. ಅವರು ತಮ್ಮ ಭಾಷಣದಲ್ಲಿ, ತ್ರಿವೇಣಿ ಸಂಗಮವು ಕೇವಲ ನದಿಗಳ ಸಂಗಮವಲ್ಲ, ನಮ್ಮ ನಂಬಿಕೆ, ಸಂಪ್ರದಾಯ ಮತ್ತು ಸಾಮರಸ್ಯದ ಸಂಕೇಶ ಎಂದು ಹೇಳಿದ್ದರು.
ಖರ್ಗೆ ವಿವಾದಾತ್ಮಕ ಹೇಳಿಕೆ:
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗಂಗಾ ಸ್ನಾನದ ಬಗ್ಗೆ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. ಜನವರಿ 27 ರಂದು ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ್ ಅವರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಖರ್ಗೆ ಅವರು, ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಬಡತನ ಹೋಗುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಆದರೆ, 2021ರಲ್ಲಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಸಂಗಮದಲ್ಲಿ ಸ್ನಾನ ಮಾಡಿದ್ದರು ಎನ್ನುವುದನ್ನು ಮಲ್ಲಿಕಾರ್ಜುನ ಖರ್ಗೆ ಅವರು ಮರೆತಂತಿದೆ. ಪಂಡಿತ್ ಜವಾಹರಲಾಲ್ ನೆಹರು ಕೂಡ 1954ರಲ್ಲಿ ನಡೆದ ಕುಂಭಮೇಳದಲ್ಲಿ ಪಾಲ್ಗೊಂಡು ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದರು. ಖರ್ಗೆ ಅವರ ಹೇಳಿಕೆಯಿಂದಾಗಿ ಕಾಂಗ್ರೆಸ್ ಪಕ್ಷದ ನಿಲುವೇನು ಎಂಬ ಪ್ರಶ್ನೆ ಉದ್ಭವಿಸಿದೆ.
ಸಂಗಮದಲ್ಲಿ ಸ್ನಾನ ಮಾಡಿದ ಕಾಂಗ್ರೆಸ್ ನಾಯಕರ ಪಟ್ಟಿಯೂ ಉದ್ದವಾಗುತ್ತಲೇ ಇತ್ತು. ಸಚಿನ್ ಪೈಲಟ್, ಡಿ.ಕೆ.ಶಿವಕುಮಾರ್, ದಿಗ್ವಿಜಯ್ ಸಿಂಗ್ ಮತ್ತು ಅವರ ಪುತ್ರ ಜೈವರ್ಧನ್ ಸಿಂಗ್, ಛಿಂದ್ವಾರಾದ ಮಾಜಿ ಸಂಸದ ನಕುಲ್ ನಾಥ್, ರಾಜೀವ್ ಶುಕ್ಲಾ, ಅಭಿಷೇಕ್ ಮನು ಸಿಂಫ್ಟಿ, ಯುಪಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ದಾಟಿ, ಈ ಪಟ್ಟಿ ಈಗ ಹಿಮಾಚಲ ಪ್ರದೇಶದ ಸಿಎಂ ಸುದ್ದಿಂದರ್ ಸಿಂಗ್ ಸುಖು ಅವರನ್ನು ತಲುಪಿದೆ.
ಛತ್ತೀಸ್ ಗಢ ಸಿಎಂ ವಿಷ್ಣುದೇವ್ ಸಾಯಿ ಜೊತೆಗೆ ಏಳು ಕಾಂಗ್ರೆಸ್ ಶಾಸಕರು ಕೂಡ ಮಹಾ ಕುಂಭ ಸ್ನಾನಕ್ಕೆ ಆಗಮಿಸಿದ್ದರು. ಇನ್ನು ರಾಜ್ಯ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಕೂಡ ಪ್ರಯಾಗರಾಜ್ ಗೆ ಭೇಟಿ ನೀಡಿ ಮಹಾಕುಂಭವನ್ನು ಕಣ್ಣುಂಬಿಕೊಂಡಿದ್ದರು.
ಕಾಂಗ್ರೆಸ್‌ನ ಹಲವಾರು ನಾಯಕರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಆದರೆ, ಖರ್ಗೆ ಅವರ ಹೇಳಿಕೆಯಿಂದಾಗಿ ಕಾಂಗ್ರೆಸ್‌ನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇನ್ನೇನು ಇಂದು ಮಹಾಕುಂಭಕ್ಕೆ ತೆರೆ ಬೀಳಲಿದೆ ಆದರೆ, ಗಂಗಾ ಸ್ನಾನದ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವೇನು ಮತ್ತು ಖರ್ಗೆ ಅವರ ಹೇಳಿಕೆಯನ್ನು ಪಕ್ಷ ಬೆಂಬಲಿಸುತ್ತದೆಯೇ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.