ಬೆಂಗಳೂರು, ನ.6- ಪತಿಯನ್ನು ಬಿಟ್ಟು ಸಹಜೀವನ ನಡೆಸುತ್ತಿದ್ದ ನರ್ಸಿಂಗ್ ವಿದ್ಯಾರ್ಥಿನಿ ಹಾಗೂ ಆಕೆಯ ಪ್ರಿಯತಮ ಒಟ್ಟಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಸೌಮಿನಿ ದಾಸ್ (20) ಹಾಗೂ ಹೋಂ ನರ್ಸ್ ಮಾಡುತ್ತಿದ್ದ ಕೇರಳ ಮೂಲದ ಅಭಿಲ್ ಅಬ್ರಹಾಂ (29) ಮೃತಪಟ್ಟವರು.
ಸೌಮಿನಿ ದಾಸ್ ವಿವಾಹವಾಗಿದ್ದು, ನರ್ಸಿಂಗ್ ವಿದ್ಯಾಭ್ಯಾಸ ಸಂಬಂಧ ನಗರದಲ್ಲಿ ವಾಸವಾಗಿದ್ದಳು. ಆ ಸಂದರ್ಭದಲ್ಲಿ ಕೇರಳ ಮೂಲದ ಹೋಂ-ನರ್ಸಿಂಗ್ ಕೆಲಸ ಮಾಡುತ್ತಿದ್ದ ಅಭಿಲ್ ಅಬ್ರಹಾಂ ಪರಿಚಯವಾಗಿದೆ. ಸೌಮಿನಿ ದಾಸ್ ಮೂರು ತಿಂಗಳ ಹಿಂದೆ ವೆಸ್ಟ್ ಬೆಂಗಾಲ್‍ಗೆ ಹೋಗಿ ವಾಪಸ್ಸು ನಗರಕ್ಕೆ ಬಂದಿದ್ದಾರೆ.
ತದನಂತರದಲ್ಲಿ ಅಬ್ರಹಾಂ ಜೊತೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿದೆ. ಬಳಿಕ ಈಕೆ ದೊಡ್ಡಗುಬ್ಬಿ ಗ್ರಾಮದ ಡಿಎಸ್ ಮ್ಯಾಕ್ಸ್ ಸ್ಟ್ರಿಂಗ್ ಫೀಲ್ಡ್ ಅಪಾರ್ಟ್‍ಮೆಂಟ್‍ನ ನಾಲ್ಕನೇ ಮಹಡಿಯ ಬಿ ಬ್ಲಾಕ್ ಪ್ಲಾಟ್ ನಂ. 422ರಲ್ಲಿ ವಾಸವಾಗಿ ಸಹಜೀವನ ನಡೆಸುತ್ತಿದ್ದರು.
ಗಣಿ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದಲ್ಲಿ ಕಾರು ಚಾಲಕ ವಶಕ್ಕೆ
ಈ ನಡುವೆ ಸೌಮಿನಿ ದಾಸ್ ಅವರ ಪತಿ ಫೋನ್ ಮಾಡಿದಾಗ ನಿನ್ನ ಜೊತೆ ನಾನಿರುವುದಿಲ್ಲ. ನೀನು ನನಗೆ ಸ್ವತಂತ್ರವಾಗಿರಲು ಬಿಡಲ್ಲ, ನಾನು ಸ್ನೇಹಿತನ ಜೊತೆಯೇ ಇರುವುದಾಗಿ ತಿಳಿಸಿದ್ದಾಳೆ. ಪ್ಲಾಟ್‍ನಲ್ಲಿದ್ದ ಇವರಿಬ್ಬರ ನಡುವೆ ಏನಾಯಿತೇನೋ ಗೊತ್ತಿಲ್ಲ, ನಿನ್ನೆ ಮಧ್ಯಾಹ್ನ 12.45ರ ಸುಮಾರಿನಲ್ಲಿ ಸೌಮಿನಿ ದಾಸ್ ಹಾಗೂ ಅಭಿಲ್ ಅಬ್ರಹಾಂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ.
ಇವರ ಪ್ಲಾಟ್‍ನಿಂದ ಕಿರುಚಾಟ ಕೇಳಿ ಅಕ್ಕಪಕ್ಕದವರು ಬಂದು ನೋಡುವಷ್ಟರಲ್ಲಿ ಸೌಮಿನಿ ದಾಸ್ ಸಂಪೂರ್ಣ ಸುಟ್ಟು ಮೃತಪಟ್ಟಿದ್ದಳು. ಗಂಭೀರ ಸ್ವರೂಪದ ಗಾಯಗಳಾಗಿದ್ದ ಅಭಿಲ್ ಅಬ್ರಹಾಂನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ರಾತ್ರಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಈಸಂಜೆಗೆ ತಿಳಿಸಿದ್ದಾರೆ.
ಸುದ್ದಿ ತಿಳಿದು ಕೊತ್ತನೂರು ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.