ಬೆಂಗಳೂರು, ಫೆ.27- ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡವಳಿಕೆ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಬಿಸಿ ತುಪ್ಪವಾಗಿದ್ದು, ನಾಯಕತ್ವ ಬದಲಾವಣೆಯ ಕೂಗಿನ ಸಂದರ್ಭದಲ್ಲಿ ವಿರೋಧಿ ಗುಂಪಿನ ಬಾಯಿ ಬಂದ್ ಮಾಡುವಂತಾಗಿದೆ.
ಮಹಾಶಿವರಾತ್ರಿ ಅಂಗವಾಗಿ ನಿನ್ನೆ ತಮಿಳುನಾಡಿನ ಕೊಯಮತ್ತೂರಿನ ಈಶಾ ಫೌಂಡೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಡಿ.ಕೆ.ಶಿವಕುಮಾರ್ ವೇದಿಕೆ ಹಂಚಿಕೊಂಡಿದ್ದಾರೆ. ಇದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ತಮಿಳುನಾಡಿಗೆ ತೆರಳುವ ಮುನ್ನಾ ಪತ್ರಿಕಾಗೋಷ್ಠಿ ನಡೆಸಿದ್ದ ಡಿ.ಕೆ.ಶಿವಕುಮಾರ್, ತಾವು ಹುಟ್ಟಿನಿಂದ ಹಿಂದೂವಾಗಿದ್ದು, ಹಿಂದೂವಾಗಿಯೇ ಉಳಿಯುತ್ತೇನೆ. ಇಶಾ ಫೌಂಡೇಷನ್ ಕಾರ್ಯಕ್ರಮದಲ್ಲಿ ಇನ್ನೂ ಭಾಗವಹಿಸಿಲ್ಲ, ಅಮಿತ್ ಶಾರನ್ನು ಭೇಟಿಯಾಗಿಲ್ಲ. ಆಗಲೇ ನನ್ನನ್ನು ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ ಎಂದು ಬಿಂಬಿಸುತ್ತಿರುವುದು ಸರಿಯಲ್ಲ ಎಂದಿದ್ದರು.
ನಿನ್ನೆ ಸಂಜೆ ಅಮಿತ್‌ರೊಂದಿಗೆ ಡಿ.ಕೆ.ಶಿವಕುಮಾರ್ ವೇದಿಕೆ ಹಂಚಿಕೊಂಡ ಬಳಿಕವಂತೂ ಸಾಮಾಜಿಕ ಜಾಲತಾಣದಲ್ಲಿ ಸಂಚಲನವೇ ಸೃಷ್ಟಿಯಾಗಿದೆ. ಡಿ.ಕೆ.ಶಿವಕುಮಾರ್ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬರ್ಥದ ಸಂದೇಶಗಳ ಮಹಾಪೂರವೇ ಹರಿದು ಬರುತ್ತಿದೆ.
ಜೈಲಿಗೆ ಹೋಗಬೇಕಾದ ಸಂದರ್ಭದಲ್ಲೂ ಡಿ.ಕೆ.ಶಿವಕುಮಾರ್ ಪಕ್ಷ ನಿಷ್ಠೆ ಬದಲಿಸದೆ ಕಾಂಗ್ರೆಸಿಗರಾಗಿ ಉಳಿದುಕೊಂಡಿದ್ದರು ಎಂಬ ಅಭಿಮಾನ ಪಕ್ಷದ ಕಾರ್ಯಕರ್ತರಲ್ಲಿ ಈಗಲೂ ಬಲವಾಗಿ ಬೇರೂರಿದೆ. ಅಂತಹ ಡಿ.ಕೆ.ಶಿವಕುಮಾರ್ ಈಗ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ, ಸಿದ್ದರಾಮಯ್ಯ ಬಣದ ಸಚಿವರು ತಮ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಹುನ್ನಾರಗಳಾಗುತ್ತಿವೆ ಎಂಬ ಕಾರಣಗಳಿಗೆ ಬಿಜೆಪಿ ಸೇರುತ್ತಾರೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಈ ಮೊದಲು ಡಿ.ಕೆ.ಶಿವಕುಮಾರ್ ಹೈಕಮಾಂಡ್ ನಾಯಕರಿಗೆ ಮಾಹಿತಿ ನೀಡದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು ಎನ್ನಲಾಗುತ್ತಿದೆ. ಆದರೆ ಮೂಲಗಳ ಪ್ರಕಾರ ಎಐಸಿಸಿ ನಾಯಕರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ ಬಳಿಕವೇ ಪ್ರಧಾನಿ ಭೇಟಿ ಮಾಡಿದರು ಎಂದು ತಿಳಿದು ಬಂದಿದೆ.
ಗಂಗಾನದಿಯಲ್ಲಿ ಮುಳುಗಿದರೆ ದೇಶದ ಬಡತನ ಕಡಿಮೆಯಾಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ ಬಳಿಕವೂ ಡಿ.ಕೆ.ಶಿವಕುಮಾರ್ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದರು. ಈ ರೀತಿಯ ಪ್ರಸಂಗಗಳನ್ನು ಮುಂದಿಟ್ಟುಕೊಂಡು ಡಿ.ಕೆ.ಶಿವಕುಮಾರ್ ಪಕ್ಷ ಬದಲಾವಣೆಯಾಗಬಹುದು ಎಂಬ ಚರ್ಚೆಯಾಗುತ್ತಿದೆ.
ಡಿ.ಕೆ.ಶಿವಕುಮಾರ್ ತಾವು ಈ ಅವಧಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಆಸೆ ಪಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸ್ವಸಾಮರ್ಥ್ಯದ ಮೇಲೆ ಅಧಿಕಾರಕ್ಕೆ ತರುತ್ತೇನೆ. ಅದಕ್ಕಾಗಿ ನನ್ನ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ. ಮುಂದಿನ ಅವಧಿಗೆ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂಬ ಸಂದೇಶವನ್ನು ಆಪ್ತ ಬಳಗಕ್ಕೆ ನೀಡುತ್ತಿದ್ದಾರೆ.
ಅದರ ಹೊರತಾಗಿಯೂ ಬಿಜೆಪಿ ನಾಯಕರ ಜೊತೆ ಡಿ.ಕೆ.ಶಿವಕುಮಾರ್ ಕಾಣಿಸಿಕೊಳ್ಳುತ್ತಿರುವುದು ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಬಿಜೆಪಿ ನಾಯಕರು, ರಾಜ್ಯ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ಸಂಚಲನವಾಗಲಿದೆ ಕಾದು ನೋಡುತ್ತಿರಿ ಎನ್ನುತ್ತಿದ್ದಾರೆ.
ಮೊದಲಿನಿಂದಲೂ ಕಾಂಗ್ರೆಸ್ ಪಕ್ಷ ದಲಿತ, ಅಲ್ಪಸಂಖ್ಯಾತ ಮತಬ್ಯಾಂಕ್ ಅನ್ನು ನಂಬಿಕೊಂಡು ರಾಜಕಾರಣ ಮಾಡುತ್ತಿದೆ. ಬಿಜೆಪಿ ಕಠೋರ ಹಿಂದುತ್ವದ ಪ್ರತಿಪಾದನೆ ಮಾಡುವುದರಿಂದ ಅಲ್ಪಸಂಖ್ಯಾತ ಮತಗಳನ್ನು ಬಹುತೇಕ ಕಳೆದುಕೊಂಡಿದೆ. ಅವು ಕಾಂಗ್ರೆಸ್ ಮಡಿಲಿನಲ್ಲಿವೆ. ಕಾಂಗ್ರೆಸ್ ಕೂಡ ಹಿಂದುತ್ವದ ಮೊರೆ ಹೋದರೆ ಅಲ್ಪಸಂಖ್ಯಾತ ಮತಗಳು ಛಿದ್ರವಾಗಲಿವೆ ಎಂಬ ಅಳುಕಿನಿಂದ ಬಹುತೇಕ ನಾಯಕರು ತಮ ಧಾರ್ಮಿಕ ಆಚರಣೆಗಳನ್ನು ಮನೆಗೆ ಅಥವಾ ದೇವಸ್ಥಾನಕ್ಕೆ ಸೀಮಿತಗೊಳಿಸಿಕೊಂಡಿದ್ದಾರೆ.
ಇಂತಹ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಬಹಿರಂಗವಾಗಿ ತಾನು ಹಿಂದು, ನನ್ನ ಆಚರಣೆಗಳು ನನ್ನವು ಎಂದು ಹೇಳುತ್ತಲೇ ಕಾಂಗ್ರೆಸ್ ನಾಯಕರಿಗೆ ಸಡ್ಡು ಹೊಡೆದಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಚುನಾವಣೆ ಸಂದರ್ಭದಲ್ಲಿ ದೇವಸ್ಥಾನ, ಚರ್ಚ್ ಹಾಗೂ ದರ್ಗಾಗಳಿಗೆ ಭೇಟಿ ನೀಡಿ, ಅಲ್ಲಿನ ಆಚರಣೆಗಳನ್ನು ಗೋಚರವಾಗುವಂತೆ ಪಾಲನೆ ಮಾಡುತ್ತಾರೆ. ಉಳಿದಂತೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರ ಬಹುತೇಕ ನಾಯಕರು ಚುನಾವಣೆ ಸಂದರ್ಭದಲ್ಲೂ ದೇವಸ್ಥಾನಗಳತ್ತ ಮುಖ ಮಾಡುವುದಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನಾನು ಎಲ್ಲ ಧರ್ಮಗಳ ಅಭಿಮಾನಿ ಎನ್ನುತ್ತಿದ್ದಾರೆ.
ಇತ್ತೀಚೆಗಂತೂ ಡಿ.ಕೆ.ಶಿವಕುಮಾರ್ ಅವರ ಧಾರ್ಮಿಕ ಆಚರಣೆಗಳು ಜೋರಾಗಿವೆ. ನನಗೆ ತೊಂದರೆ ಕೊಡುವವರಿಂದ ರಕ್ಷಣೆ ಬೇಕಲ್ಲ ಅದಕ್ಕೆ ದೇವರ ಮೊರೆ ಹೋಗಿದ್ದೇನೆ ಎಂದು ಬಹಿರಂಗವಾಗಿಯೇ ಟಾಂಗ್ ನೀಡುತ್ತಿದ್ದಾರೆ.
ಒಬ್ಬರಿಗೆ ಒಂದೇ ಹುದ್ದೆ ನಿಯಮ ಅನುಸಾರ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಸಿದ್ದರಾಮಯ್ಯ ಅವರ ಬೆಂಬಲಿಗರು ಒಂದು ಸುತ್ತಿನ ಕಸರತ್ತು ನಡೆಸಿ, ದೆಹಲಿ ಯಾತ್ರೆಯನ್ನು ನಡೆಸಿ ವಿಫಲರಾಗಿದ್ದಾರೆ. ಇದೆಲ್ಲಾ ಸಿಟ್ಟಿಗೆ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಂಡು ಕಾಂಗ್ರೆಸ್ ಹೈಕಮಾಂಡ್‌ಗೆ ಬಿಸಿ ತುಪ್ಪವಾಗುತ್ತಿದ್ದಾರೆ ಎಂಬ ಚರ್ಚೆಗಳಿವೆ.
ಕಾಂಗ್ರೆಸ್ ಪಾಳೆಯದಲ್ಲಿ ಕೇಳಿ ಬರುತ್ತಿರುವ ಪಿಸುಧ್ವನಿಗಳ ಪ್ರಕಾರ, ಡಿ.ಕೆ.ಶಿವಕುಮಾರ್ ಈ ಅವಧಿಯಲ್ಲೇ ಮಹಾರಾಷ್ಟ್ರದ ಏಕನಾಥ್ ಶಿಂಧೆ ಮಾದರಿಯ ಸಂಚಲನಕ್ಕೆ ಮುನ್ನುಡಿಯಾಗಲಿದ್ದಾರೆ ಎಂಬ ಚರ್ಚೆಗಳಿವೆ.ಆದರೆ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಹಿನ್ನೆಲೆ ನೋಡಿದವರು ಅಷ್ಟು ಸುಲಭವಾಗಿ ಅಧಿಕಾರಕ್ಕಾಗಿ, ಪಕ್ಷ ನಿಷ್ಠೆ ಬದಲಿಸುವಷ್ಟು ಜಾಳಾಗಿಲ್ಲ ಎಂಬ ವ್ಯಾಖ್ಯಾನಗಳು ಕೇಳಿ ಬರುತ್ತಿವೆ.