ಬೆಂಗಳೂರು, ಫೆ.27- ಹೊಟೇಲ್ ವೊಂದರ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕೆಳಗೆ ಬೀಳಿಸಿ ಹೆಲ್ಮೆಟ್ ನಿಂದ ಜಜ್ಜಿದ್ದ ಬಗ್ಗೆ ಪ್ರಶ್ನಿಸಿದ ಹೊಟೇಲ್ ಮಾಲೀಕರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಪ್ರತಿಷ್ಠಿತ ಜ್ಯುವೆಲರ್ಸ್ ಮಾಲೀಕ ಸೇರಿ ಮೂವರನ್ನು ಎಚ್ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜ್ಯುವೆಲರ್ಸ್ ಮಾಲೀಕ ವಿಷ್ಣು ಚರಣ್ ಭಟ್ (36) ಹಾಗೂ ಸ್ನೇಹಿತರಾದ ಕೆವಿನ್ ಥಾಮಸ್, ಸತೀಶ್ ಸ್ವಾಮಿ ಬಂಧಿತರು.
ಎಚ್‌ಎಸ್‌ಆರ್ ಲೇಔಟ್ ನಿವಾಸಿ ವಿಷ್ಣು ಚರಣ್ ಭಟ್ ಅವರು ಫೆ.9ರಂದು ಇಬ್ಬರು ಸ್ನೇಹಿತರೊಂದಿಗೆ ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್‌ನಲ್ಲಿರುವ ಎ2ಬಿ ಹೊಟೇಲ್‌ಗೆ ಹೋಗಿ ತಿಂಡಿ ಸೇವಿಸಿ ಹೊರಗೆ ಬಂದಿದ್ದಾರೆ. ಈ ವೇಳೆ ಹೊಟೇಲ್ ಮುಂದೆ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವನ್ನು ವಿಷ್ಣುಚರಣ್ ಅವರು ಕಾಲಿನಿಂದ ಒದ್ದು ಕೆಳಗೆ ಬೀಳಿಸಿದ್ದಲ್ಲದೆ, ಹೆಲೈಟ್ ತೆಗೆದುಕೊಂಡು ವಾಹನಕ್ಕೆ ಜಜ್ಜಿ ಹೋಗಿದ್ದರು.
ಈ ಘಟನೆ ಹೊಟೇಲ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಗಮನಿಸಿದ ಹೊಟೇಲ್ ಮಾಲೀಕರು, ಇವರು ನಮ್ಮ ಹೊಟೇಲ್‌ಗೆ ಆಗಾಗ್ಗೆ ಬರುವ ಗ್ರಾಹಕರೆಂದು ಸುಮ್ಮನಾದರು. ನಿನ್ನೆ ಬೆಳಗ್ಗೆ 8.30ರ ಸುಮಾರಿಗೆ ಇದೇಹೊಟೇಲ್‌ಗೆ ಈ ಮೂವರು ಕಾಫಿ ಕುಡಿಯಲು ಬಂದಾಗ, ಹೊಟೇಲ್ ಮಾಲೀಕರಾದ ತಿರುಸೆಲ್ವಂ ಸೆಂದಿಲ್ ಎಂಬುವವರು ದ್ವಿಚಕ್ರ ವಾಹನ ಬೀಳಿಸಿದ್ದ ಬಗ್ಗೆ ಕೇಳಿದಾಗ ಮಾತಿಗೆ ಮಾತು ಬೆಳೆದು ಜಗಳವಾಗಿದೆ.
ಆಗ ಕೋಪಗೊಂಡ ವಿಷ್ಣುಚರಣ್ ಭಟ್ ಅವರು ಮಾಲೀಕರ ಮೇಲೆ ಹಲ್ಲೆ ಮಾಡಿ ನಿಮ್ಮ ಮೇಲೆ ಕಾರು ಹತ್ತಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದರು. ಈ ಬಗ್ಗೆ ತಿರುಸೆಲ್ವಂ ಅವರು ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆ ಪೊಲೀಸರು ಇದೀಗ ಮೂವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.