ಬೆಂಗಳೂರು,ಫೆ.28 – ಪ್ರಸಕ್ತ 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ನಾಳೆಯಿಂದ ಮಾರ್ಚ್ 20ವರೆಗೆ ರಾಜ್ಯಾದ್ಯಂತ ನಡೆಯಲಿದೆ. ಈ ಬಾರಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.
ದ್ವಿತೀಯ ಪಿಯುಸಿ ಪರೀಕ್ಷೆಗೆ 7,13,812 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಹೊಸಬರು 6,61,474 ಪುನರಾವರ್ತಿತ 34,071 ಹಾಗೂ 18,317 ಖಾಸಗಿ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 1,171 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ಪ್ರಕಾರ, ಪರೀಕ್ಷೆ ಸಂದರ್ಭದಲ್ಲಿ ನಕಲು ಮಾಡುವುದನ್ನು ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಮೂಲಕ ವೀಕ್ಷಣೆ ಮಾಡಲಾಗುತ್ತದೆ. ಪರೀಕ್ಷೆ ನಡೆಯುವ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುತ್ತದೆ. ನಿಷೇಧಿತ ಪ್ರದೇಶದಲ್ಲಿ ಜೆರಾಕ್ಸ್, ಸೈಬರ್.
ಕಂಪ್ಯೂಟರ್ ಸೆಂಟರ್‌ಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ಪ್ರಶ್ನೆಪತ್ರಿಕೆಗಳ ಸೋರಿಕೆ ಮತ್ತು ಪರೀಕ್ಷಾ ಆಕ್ರಮಗಳಿಗೆ ಉತ್ತೇಜಿಸುವ ವ್ಯಕ್ತಿಗಳ ವಿರುದ್ಧ ಶಿಕ್ಷಣ ಕಾಯಿದೆಯ ನಿಯಮಗಳಡಿಯಲ್ಲಿ ಅಗತ್ಯವಾದ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಈಯರ್ ಫೋನ್ ಸೇರಿದಂತೆ ಎಲ್ಲಾ ವಿಧದ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಲಾಗಿದೆ. ನಾಳೆ ಬೆಳಗ್ಗೆ 10 ರಿಂದ 1 ಗಂಟೆವರೆಗೆ ಕನ್ನಡ, ಅರೇಬಿಕ್ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆ ನಡೆಸಲು ಬೇಕಾಗಿರುವ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಹೇಳಿದೆ. ಕಳೆದ ಬಾರಿಯಂತೆ ಈ ಬಾರಿಯೂ 3 ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, 2,91,959 ವಿಜ್ಞಾನ, 2,29,308 ವಾಣಿಜ್ಯ, 1,92,595 ಕಲಾ ವಿಭಾಗದ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ನೋಂದಾಯಿಸಿದ್ದಾರೆ.
ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲು ಅನುಕೂಲವಾಗುವಂತೆ 2,342 ಸ್ಥಾನಿಕ ಜಾಗೃತ ದಳ, 504 ವಿಚಕ್ಷಣ ಜಾಗೃತದಳ, 365 ಪ್ರಶ್ನೆಪತ್ರಿಕೆ ವಿತರಣಾ ಮಾರ್ಗಗಳನ್ನು ಗುರುತಿಸಲಾಗಿದೆ.
1,171 ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಉಪ/ಜಂಟಿ ಮುಖ್ಯ ಅಧೀಕ್ಷಕರು, ಉತ್ತರ ಪತ್ರಿಕೆಗಳ/ಪ್ರಶ್ನೆಪತ್ರಿಕೆಗಳ ಪಾಲಕರನ್ನು ನಿಯೋಜಿಸಲಾಗುತ್ತದೆ. 76 ಕೇಂದ್ರಗಳಲ್ಲಿ 31,000 ಮೌಲ್ಯಮಾಪಕರು ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡಲಿದ್ದಾರೆ.
ವಿದ್ಯಾರ್ಥಿಗಳು ತಮ್ಮ ನಿವಾಸದಿಂದ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಮತ್ತು ಮರಳಿ ಮನೆಗೆ ಬರಲು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಕಾಲೇಜಿನ ಗುರುತಿನ ಚೀಟಿ ಮತ್ತು ಪ್ರವೇಶಪತ್ರವನ್ನು ತೋರಿಸಿ ಪ್ರಯಾಣಿಸಬಹುದಾಗಿದೆ.