Saturday, March 1, 2025
Homeರಾಜಕೀಯ | Politicsಸಿದ್ದರಾಮಯ್ಯನವರೇ, ಅಮಿತ್ ಶಾ ಅವರ ಹೇಳಿಕೆ ತಿರುಚಿ ಜನರ ದಿಕ್ಕು ತಪ್ಪಿಸಬೇಡಿ : ವಿಜಯೇಂದ್ರ

ಸಿದ್ದರಾಮಯ್ಯನವರೇ, ಅಮಿತ್ ಶಾ ಅವರ ಹೇಳಿಕೆ ತಿರುಚಿ ಜನರ ದಿಕ್ಕು ತಪ್ಪಿಸಬೇಡಿ : ವಿಜಯೇಂದ್ರ

don't mislead people by twisting Amit Shah's statement: Vijayendra

ಬೆಂಗಳೂರು,ಫೆ.28-ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ತಿರುಚಿ ತೋಳ ಬಂತು ತೋಳ ಎಂದು ಜನರಿಗೆ ಭಯಹುಟ್ಟಿಸಲು ಹೊರಟಿರುವ ಸಿದ್ದರಾಮಯ್ಯನವರೇ, ಅಮಿತ್ ಶಾ ಹೇಳಿರುವುದು ಹಾಲಿ ಲೋಕಸಭಾ ಸಂಖ್ಯೆಗೆ ಆಧಾರಿತವಾಗಿ ಶೇಕಡಾವಾರು ಲೋಕಸಭಾ ಕ್ಷೇತ್ರಗಳು ಹೆಚ್ಚಾಗುತ್ತವೆ. ಆ ಸಂಖ್ಯೆ ಎಲ್ಲಾ ರಾಜ್ಯಗಳಿಗೂ ಅನ್ವಯಿಸುತ್ತದೆ. ಎಲ್ಲಾ ರಾಜ್ಯಗಳ ಲೋಕಸಭಾ/ವಿಧಾನಸಭಾ ಕ್ಷೇತ್ರಗಳು ಈಗಿರುವುದಕ್ಕಿಂತ ಹೆಚ್ಚಾಗುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಷ್ಪಷ್ಟಪಡಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಉತ್ತರ ಪ್ರದೇಶದಲ್ಲಿ ಯಾವ ಪ್ರಮಾಣದಲ್ಲಿ ಹೆಚ್ಚಾಗುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಕರ್ನಾಟಕದಲ್ಲಿಯೂ ಹೆಚ್ಚಾಗುತ್ತದೆ. ಹಾಲಿ ಕ್ಷೇತ್ರಗಳ ಸಂಖ್ಯೆಯನ್ನು ಶೇಕಡವಾರು ಪ್ರಮಾಣವಾಗಿ ಪರಿಗಣಿಸಲಾಗುತ್ತದೆಯೇ ಹೊರತು ಜನಸಂಖ್ಯೆಯನ್ನಲ್ಲ ಎಂಬುದನ್ನು ಮುಖ್ಯಮಂತ್ರಿಗಳಾಗಿ ಮೊದಲು ಅರ್ಥಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ನಾಡು-ನುಡಿ, ಜನರ ಹಿತರಕ್ಷಣೆಯ ವಿಷಯದಲ್ಲಿ ಬಿಜೆಪಿ ಎಂದಿಗೂ ರಾಜಿಯಾಗುವ ಪ್ರಶ್ನೆಯೇ ಇಲ್ಲ, ನಾಡ ಬಗೆಗಿನ ಕಾಳಜಿಯಲ್ಲಿ ಬಿಜೆಪಿ ಎಂದಿಗೂ ಎರಡನೆಯ ಸ್ಥಾನದಲ್ಲಿ ಇರುವುದಿಲ್ಲ ಎನ್ನುವುದನ್ನು ಮುಖ್ಯಮಂತ್ರಿಗಳಿಗೆ ಮನನ ಮಾಡಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಜನರ ದಿಕ್ಕು ತಪ್ಪಿಸಲು ಹೊರಟಿರುವ ಸಿದ್ದರಾಮಯ್ಯನವರ ಹೇಳಿಕೆಯಲ್ಲಿ ಯಾವ ಸತ್ಯಾಂಶವೂ ಇಲ್ಲ. ಹುರುಳೂ ಇಲ್ಲ.ಈ ಮೊದಲಿನಿಂದಲೂ ಪ್ರಾಂತೀಯತೆಯ ಹೆಸರಿನಲ್ಲಿ ಇಲ್ಲಸಲ್ಲದ ಅಪ ಪ್ರಚಾರ ನಡೆಸುತ್ತಿರುವ ತಮಿಳುನಾಡಿನ ಡಿಎಂಕೆ ಸರ್ಕಾರದ ಆಧಾರ ರಹಿತ ಅಪಪ್ರಚಾರದ ತಾಳಕ್ಕೆ ಕರ್ನಾಟಕದ ಮುಖ್ಯಮಂತ್ರಿಗಳು ಹೆಜ್ಜೆ ಹಾಕುತ್ತಿರುವಂತಿದೆ ಎಂದು ಆರೋಪಿಸಿದ್ದಾರೆ.

ಈಗಾಗಲೇ ಐತಿಹಾಸಿಕ ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದು ಮಹತ್ವದ ಹೆಜ್ಜೆ ಇಡಲಾಗಿದೆ, ಇದರ ಜತೆ ಜತೆಗೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿದು ಮಹತ್ವದ ಸುಧಾರಣೆ ತರಲು ಕ್ಷೇತ್ರ ಮರು ವಿಂಗಡಣೆಯ ಕಾರ್ಯವನ್ನು ಚುರುಕುಗೊಳಿಸಿದೆ ಎಂದು ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದಾರೆ. ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ನಂತರ ದೇಶದ ಅಭಿವೃದ್ಧಿಯು ದಿನದಿಂದ ದಿನಕ್ಕೆ ದಾಪುಗಳನ್ನಿಡುತ್ತಿದೆ. ರಾಷ್ಟ್ರಕಟ್ಟುವ ಸಂಕಲ್ಪ ಭಾರತೀಯರಲ್ಲಿ ಗಟ್ಟಿಗೊಳ್ಳುತ್ತಿದೆ. ಇದರ ಪರಿಣಾಮ ಮೂರನೇ ಅವಧಿಗೂ ಪ್ರಧಾನಿ ನರೇಂದ್ರ ಮೋದಿಜೀ ಅವರ ನೇತೃತ್ವದ ಎನ್‌ಡಿಎ ಸರ್ಕಾರವನ್ನು ದೇಶದ ಜನತೆ ಮತ್ತೆ ಅಧಿಕಾರಕ್ಕೆ ತಂದಿದ್ದಾರೆ ಎಂದಿದ್ದಾರೆ.

ಮೋದಿ ಅವರ ಆಡಳಿತ ಅವಧಿಯಲ್ಲಿ ದೇಶ ಐತಿಹಾಸಿಕ ನಿರ್ಧಾರ ಹಾಗೂ ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಅಯೋಧ್ಯೆಯ ರಾಮ ಮಂದಿರ, ಆರ್ಟಿಕಲ್ 370 ರದ್ದತಿ, ಭಾರತದ ಸಾರ್ವಭೌಮತ್ವದ ಧೀಮಂತಿಕೆಯನ್ನು ಸಾಕ್ಷೀಕರಿಸಿತು. ಇದನ್ನೆಲ್ಲ ಸಹಿಸಿಕೊಳ್ಳಲಾಗದ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುವುದು, ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯುಂಟು ಮಾಡುವುದನ್ನು ಬಿಟ್ಟರೆ ಇನ್ಯಾವ ರಚನಾತ್ಮಕ ಸಲಹೆ ಹಾಗೂ ಸಹಕಾರಗಳನ್ನು ನೀಡುವ ಔದಾರ್ಯತೆ ತೋರದೆ ತಮ್ಮ ಕುಬ್ಬತನವನ್ನು ಹಾಗೂ ಅಸೂಯೆಯನ್ನು ಪ್ರದರ್ಶಿಸುತ್ತಾ ಬಂದಿವೆ ಎಂದು ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಳಿ ನಡೆಸಿದ್ದಾರೆ.

RELATED ARTICLES

Latest News