ಕಂಡು,ಫೆ.28- ನೇಪಾಳದ ಕಟ್ಮಂಡುವಿನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆ ದಾಖಲಾಗಿದೆ. ನೇಪಾಳದ ಪೂರ್ವ ಮತ್ತು ಮಧ್ಯ ಭಾಗಗಳಲ್ಲಿರುವ ಜನರಿಗೆ ಭೂಕಂಪದ ಅನುಭವ ಆಗಿದೆ. ಅಲ್ಲದೆ ಭಾರತ ಚೀನಾ ಮತ್ತು ಟಿಬೆಟ್‌ನ ಕೆಲವು ಭಾಗಗಳಲ್ಲೂ ಭೂಕಂಪದ ಅನುಭವ ಆಗಿದೆ.
ಹಿಮಾಲಯದ ಮಧ್ಯಭಾಗದ ಸಿಂಧುಪಾಲ್‌ಚೌಕ್ ಜಿಲ್ಲೆಯಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ. ರಾಷ್ಟ್ರೀಯ ಭೂಕಂಪ ನಿರ್ವಹಣಾ ಮತ್ತು ಸಂಶೋಧನಾ ಕೇಂದ್ರ ತನ್ನ ವೆಬ್‌ಸೈಟ್‌ನಲ್ಲಿ ಭೂಕಂಪದ ಕೇಂದ್ರವು ಸಿಂಧುಪಾಲ್‌ಚೌಕ್ ಜಿಲ್ಲೆಯ ಭೈರವಕುಂಡದಲ್ಲಿ ಸ್ಥಳೀಯ ಕಾಲಮಾನ ಬೆಳಗಿನ ಜಾವ 2:51ಕ್ಕೆ ಆಗಿದೆ ಎಂದು ಗುರುತಿಸಿದೆ.
ನೇಪಾಳದ ಹಲವು ಪ್ರದೇಶಗಳಲ್ಲಿ ವಿಶೇಷವಾಗಿ ಪೂರ್ವ ಮತ್ತು ಮಧ್ಯ ಪ್ರದೇಶಗಳಲ್ಲಿ, ಭೂಮಿ ಕಂಪಿಸಿದ ಅನುಭವ ಉಂಟಾಗಿದೆ ಎಂದು ವರದಿ ಮಾಡಿದೆ. ಭಾರತ ಮತ್ತು ಟಿಬೆಟ್, ಚೀನಾದ ಗಡಿ ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದೆ ಎಂದು ವರದಿಗಳು ತಿಳಿಸಿವೆ.
ಭೂಕಂಪದ ಪರಿಣಾಮ ಯಾವುದೇ ಸಾವುನೋವುಗಳು ಅಥವಾ ಗಂಭೀರ ಹಾನಿಗಳು ಸಂಭವಿಸಿಲ್ಲ. ಅಧಿಕಾರಿಗಳು ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ನೇಪಾಳವು ಹೆಚ್ಚು ಭೂಕಂಪ ಪೀಡಿತ ಪ್ರದೇಶವಾಗಿರುವುದರಿಂದ, ಜನರು ಎಚ್ಚರಿಕೆಯಿಂದಿರಲು ಮತ್ತು ನಂತರದ ಭೂಕಂಪಗಳ ಬಗ್ಗೆ ಜಾಗರೂಕರಾಗಿರಲು ಅಧಿಕಾರಿಗಳು ಸೂಚಿಸಿದ್ದಾರೆ. ಭೂಕಂಪದ ನಂತರದ ಸಣ್ಣ ಕಂಪನಗಳಿಗೆ ಸಿದ್ದರಾಗಿರಿ ಎಂದೂ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ನಿನ್ನೆಯಷ್ಟೇ ಆಸ್ಸಾಂನ ಮೊರಿಗಾಂವ್ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ 5.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ರಾಜಧಾನಿ ಗುವಾಹಟಿ ಮತ್ತು ರಾಜ್ಯದ ಇತರ ಭಾಗಗಳಲ್ಲೂ ಜನ ಕಂಪನದ ಅನುಭವ ಪಡೆದುಕೊಂಡಿದ್ದರು. ಭೂಕಂಪವು ಭೂಮಿಯ 16 ಕಿಲೋಮೀಟರ್ ಆಳದಲ್ಲಿ ಆಗಿದ್ದು, ತಡರಾತ್ರಿ ಸುಮಾರು 2:25 ಗಂಟೆಗೆ ಈ ಕಂಪನ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.