Friday, February 28, 2025
Homeಜಿಲ್ಲಾ ಸುದ್ದಿಗಳು | District Newsಮೈಸೂರು | Mysuruಪೊಲೀಸರಿಗೆ ತಲೆನೋವಾದ ಪೆರೋಲ್ ಮೇಲೆ ತೆರಳಿದ್ದ ಮೂವರು ಖೈದಿಗಳು

ಪೊಲೀಸರಿಗೆ ತಲೆನೋವಾದ ಪೆರೋಲ್ ಮೇಲೆ ತೆರಳಿದ್ದ ಮೂವರು ಖೈದಿಗಳು

Three prisoners who went on parole are create headache for the police

ಮೈಸೂರು,ಫೆ.28– ಪೆರೋಲ್‌ನಲ್ಲಿ ಮೈಸೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದ ಮೂವರು ಖೈದಿಗಳ ಪೈಕಿ ಓರ್ವ ಆತ್ಮಹತ್ಯೆ ಮಾಡಿಕೊಂಡರೆ ಮತ್ತೊಬ್ಬ ಒಡಿಶಾದಲ್ಲಿ ಗಾಂಜಾ ಪ್ರಕರಣದಲ್ಲಿ ಬಂಧನವಾಗಿದ್ದು ಮತ್ತೊಬ್ಬ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಮೋಹನ್ ಕುಮಾರ್ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೊಲೆ ಪ್ರಕರಣದಲ್ಲಿ ಸಜಾ ಖೈದಿಯಾಗಿದ್ದ ಹಾಸನ ಮೂಲದ ನವೀನ್ 60 ದಿನಗಳ ಅವಧಿಗೆ ಪೆರೋಲ್‌ನಲ್ಲಿ ತೆರಳಿದ ನಂತರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮತ್ತೊಬ್ಬ ಒಡಿಶಾ ರಾಜ್ಯದ ಸುನೀಲ್ ಬೀರಾ ಪೆರೋಲ್‌ನಲ್ಲಿ ಬಿಡುಗಡೆಯಾದ ನಂತರ ನಾಪತ್ತೆಯಾಗಿದ್ದಾನೆ. ಮತ್ತೊಬ್ಬ ಖೈದಿ ವೆಂಕಣ್ಣ ಆಂಧ್ರ ರಾಜ್ಯದ ವಿಶಾಖಪಟ್ಟಣ ನಿವಾಸಿ ವೆಂಕಣ್ಣ ಪೆರೋಲ್‌ನಲ್ಲಿ ಬಿಡುಗಡೆಯಾಗಿ ತೆರಳಿದ ನಂತರ ಒಡಿಶಾದಲ್ಲಿ ಗಾಂಜಾ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ.

ಹಾಸನದ ನವೀನ್ ಡಿಸೆಂಬರ್ 6 ರಂದು 60 ದಿನಗಳ ಅವಧಿಗೆ ಬಿಡುಗಡೆಯಾಗಿ ಸ್ವಗ್ರಾಮ ಹಲಸನಹಳ್ಳಿಗೆ ತೆರಳಿದ್ದಾನೆ. ಫೆ.2 ರಂದು ಅವಧಿ ಮುಗಿದು ಶರಣಾಗಬೇಕಿತ್ತು. ಆದರೆ ನವೀನ್ ಈ ಮಧ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಒಡಿಶಾ ಮೂಲದ ಸುನೀಲ್ ಬೀರಾ ಡಿ.12 ರಂದು 60 ದಿನಗಳ ಅವಧಿಗೆ ಬಿಡುಗಡೆಯಾಗಿ ಪೆರೋಲ್ ಮೇಲೆ ತೆರಳಿದ್ದಾನೆ. ನಿಗದಿತ ಸಮಯಕ್ಕೆ ಶರಣಾಗದೆ ನಾಪತ್ತೆಯಾಗಿದ್ದಾನೆ. ಆಂಧ್ರ ರಾಜ್ಯ ವಿಶಾಖಪಟ್ಟಣದ ವೆಂಕಣ್ಣ ಡಿಸೆಂಬರ್‌ನಲ್ಲಿ ತೆರಳಿದವನು ನಿಗದಿತ ಸಮಯಕ್ಕೆ ಹಿಂದಿರುಗಿ ಶರಣಾಗಿಲ್ಲ. ಈತ ಒಡಿಶಾದಲ್ಲಿ ಗಾಂಜಾ ಪ್ರಕರಣದಲ್ಲಿ ಸಿಲುಕಿ ಜೈಲುವಾಸಿಯಾಗಿದ್ದಾನೆ.

ವೆಂಕಣ್ಣ ಪ್ರಕರಣದಲ್ಲಿ ಒಡಿಶಾ ನ್ಯಾಯಾಲಯ ಜಾಮೀನು ನೀಡಿದ ನಂತರ ಮೈಸೂರು ಪೊಲೀಸರು ವಶಕ್ಕೆ ಪಡೆಯಬೇಕಿದೆ. ಸುನೀಲ್ ಬೀರಾ ಪ್ರಕರಣದಲ್ಲಿ ನಾಪತ್ತೆಯಾದವನನ್ನು ಹುಡುಕಬೇಕಿದೆ. ನವೀನ್ ಆತ್ಮಹತ್ಯೆಗೆ ಶರಣಾದ ಹಿನ್ನೆಲೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಒಟ್ಟಾರೆ ಪೆರೋಲ್‌ನಲ್ಲಿ ತೆರಳಿದ ಖೈದಿಗಳು ಮೈಸೂರಿನ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ.

RELATED ARTICLES

Latest News