ಬೆಂಗಳೂರು,ಫೆ.28 – ಪ್ಲಾಸ್ಟಿಕ್ ಬಳಸಿ ತಯಾರಿಸುವ ಇಡ್ಲಿ ಸೇವಿಸುವುದರಿಂದ ಡಿಎನ್ಎ ಬದಲಾಗುವ ಆತಂಕ ಇದೆ. ಹಸಿರು ಬಟಾಣಿಯಲ್ಲಿ ನಿಷೇಧಿತ ಬಣ್ಣದ ಬಳಕೆ ಮಾಡಲಾಗುತ್ತಿದೆ. ಟ್ಯಾಟೂ ಹಾಕಲು ಅಪಾಯಕಾರಿಯಾದ ರಾಸಾಯನಿಕವನ್ನು ಉಪಯೋಗಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ಯಾಟೂ ಹಾಕಲು 22 ಹವಿಮೆಟಲ್‌ಗಳಿರುವ ಇಂಕ್‌ಗಳನ್ನು ಬಳಸಲಾಗುತ್ತಿದೆ. ಸೆಲೇನಿಯಂ, ಕ್ರೋಮಿಯಂ, ಪ್ಲಾಟಿನಂ, ಅರ್ಸೆನಿಕ್‌ನಂತಹ ಇಂಕ್ಗಳ ಬಳಕೆಯಿಂದ ಚರ್ಮ ರೋಗಗಳು, ಬ್ಯಾಕ್ಟಿರಿಯಾ ಸೋಂಕು, ವೈರಲ್ ಇನ್ಸೆಕ್ಷನ್, ಫಂಗಸ್ ಇನ್ಸೆಕ್ಷನ್ ಬರುವ ಅಪಾಯವಿದೆ.
ಟ್ಯಾಟೂ ಉದ್ಯಮವನ್ನು ನಿಯಂತ್ರಿಸಲು ಯಾವುದೇ ನಿಯಮಗಳಿಲ್ಲ. ಹೀಗಾಗಿ ಸ್ಪಷ್ಟ ಮಾರ್ಗಸೂಚಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ದೂರಗಾಮಿ ಆಪಾಯಗಳ ಬಗ್ಗೆಯೂ ಅಧ್ಯಯನ ನಡೆಸಲಾಗುತ್ತಿದೆ. ಫೆಬ್ರವರಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಇಡ್ಲಿ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದೆ.
ಪ್ಲಾಸ್ಟಿಕ್ ಬಳಕೆ ಮಾಡಿರುವ 52 ಮಾದರಿಗಳು ಅಪಾಯಕಾರಿ ಎಂದು ತಿಳಿದುಬಂದಿದ್ದು ಅಂತಹ ಹೋಟೆಲ್ಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ಮೈಕ್ರೋ ಪ್ಲಾಸ್ಟಿಕ್ ದೇಹದ ಜೀವಕೋಶಗಳಿಗೆ ಸೇರಿ ಸಾಯುವವರೆಗೂ ಉಳಿದುಬಿಡುತ್ತದೆ. ಡಿಎನ್ಎ ಕೂಡ ಬದಲಾವಣೆ ಮಾಡುತ್ತಿದೆ. ಕ್ಯಾನ್ಸರ್ ಬರುವ ಸಾಧ್ಯತೆಗಳನ್ನು ವೇಗಗೊಳಿಸುತ್ತದೆ. ಹೀಗಾಗಿ ಪ್ಲಾಸ್ಟಿಕ್ ಬಳಸುವಂತಹ ಆಹಾರವನ್ನು ಸೇವಿಸಬಾರದು ಎಂದರು.
ಹಸಿರು ಬಟಾಣಿಯಲ್ಲಿ ನಿಷೇಧಿತ ಸನ್ಸೆಟ್ ಎಲ್ಲೋ, ಟೆಟ್ರಾಜನ್‌ನಂತಹ ಬಣ್ಣಗಳನ್ನು ಬಳಕೆ ಮಾಡಲಾಗುತ್ತಿದೆ. 106 ಮಾದರಿಯಲ್ಲಿ 31 ಮಾದರಿಗಳನ್ನು ಈವರೆಗೂ ವಿಶ್ಲೇಷಣೆ ನಡೆಸಲಾಗಿದ್ದು, 26 ಆಸುರಕ್ಷಿತ ಎಂದು ಖಚಿತವಾಗಿದೆ. 5 ಸುರಕ್ಷಿತವಾಗಿವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಆಹಾರದ ಅಸುರಕ್ಷತೆ ನಮ್ಮಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದರು.
ಕುಡಿಯುವ ನೀರಿನ 285 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅದರ ವಿಶ್ಲೇಷಣೆ ಮುಂದುವರೆದಿದೆ. ಕೇಕ್‌ನ ವಿಶ್ಲೇಷಣೆ ವೇಳೆ ಆಪಾಯಕಾರಿ ಅಂಶ ತಗ್ಗಿರುವುದು ಆಶಾದಾಯಕ ಬೆಳವಣಿಗೆ ಎಂದರು.
ನಿಯಮ ಮೀರಿ 52 ಔಷಧಿ ಮಳಿಗೆಗಳು ಅಕ್ರಮವಾಗಿ ಅಂಟಿಬಯೋಟಿಕ್ ಔಷಧಿಗಳನ್ನು ಮಾರಾಟ ಮಾಡಿದ್ದು ಅವುಗಳ ಮೇಲೆ ಮೊಕದ್ದಮೆ ದಾಖಲಿಸಲಾಗುತ್ತಿದೆ. 408 ಔಷಧಿ ಮಳಿಗೆಗಳನ್ನು ಪರೀಕ್ಷಿಸುವುದು, ಮಾದಕ ಔಷಧಿಗಳ ದುರ್ಬಳಕೆ ತಡೆಯಲು 400 ಮಳಿಗೆಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. 213 ಮಳಿಗೆಗಳ ಪರವಾನಗಿ ಅಮಾನತುಗೊಳಿಸಿದ್ದು, 100 ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.
ರಿಂಗರ್ ಲ್ಯಾಕ್ಟಿಟ್ ದ್ರಾವಣ ಬಳಕೆಯಿಂದ ಬಾಣಂತಿಯರ ಸಾವಿನ ಪ್ರಕರಣಗಳಾಗಿದ್ದು, 246 ಬ್ಯಾಚ್‌ಗಳಲ್ಲಿ 113 ಅನುತ್ತಮ ಗುಣಮಟ್ಟ ಎಂದು ಘೋಷಿತವಾಗಿದೆ. ಸಂಸ್ಥೆಯ ವಿರುದ್ಧ 36 ಪ್ರಕರಣಗಳನ್ನು ದಾಖಲಿಸಲು ಅನುಮತಿ ನೀಡಲಾಗಿದೆ ಎಂದರು. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಔಷಧಿಗಳು ಕಾಂತಿವರ್ಧಕಗಳ ಮೇಲೆ ನಿಯಮಾನುಸಾರ ನಿಯಂತ್ರಣ ಕ್ರಮ ಕೈಗೊಳ್ಳಲು ಹಾಗೂ ಸುರಕ್ಷಿತ ವಾತಾವರಣ ನಿರ್ಮಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.
ಕಳಪೆ ಔಷಧಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಹಾಗೂ ಸಾರ್ವಜನಿಕರಿಗೆ, ಮಾರಾಟಗಾರರಿಗೆ ಮಾಹಿತಿ ನೀಡಲು ಪ್ರತ್ಯೇಕ ಆ್ಯಪ್ ನಿರ್ಮಿಸಲಾಗುತ್ತಿದೆ. ಪ್ರಯೋಗಾಲಯದಲ್ಲಿ ಪರೀಕ್ಷಾ ವರದಿಯಿಂದ ಕಳಪೆ ಪತ್ತೆಯಾದರೆ ತಕ್ಷಣವೇ ಔಷಧಿ ಸರಬರಾಜುದಾರರು, ಸಗಟು ಮಾರಾಟಗಾರರು, ವಿತರಕರು, ಚಿಲ್ಲರೆ ಮಾರಾಟಗಾರರು ಮತ್ತು ಫಾರ್ಮಸಿಸ್ಟ್‌ಗಳಿಗೆ ಮಾಹಿತಿ ನೀಡಲು ಅನುಕೂಲವಾಗುವಂತೆ ಆ್ಯಪ್ ಬಳಕೆ ಮಾಡಲಾಗುವುದು ಮತ್ತು ಔಷಧಿಯನ್ನು ಹಿಂಪಡೆಯಲು ಉತ್ಪಾದಕ ಕಂಪನಿಗೂ ಸೂಚನೆ ನೀಡಲಾಗುವುದು. ಈ ನಿಟ್ಟಿನಲ್ಲಿ ಸ್ಪಷ್ಟ ನಿಯಮಾವಳಿ ಹಾಗೂ ಮಾರ್ಗಸೂಚಿ ರೂಪಿಸುವಂತೆ ಕೇಂದ್ರಸರ್ಕಾರಕ್ಕೂ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.