ಬೆಂಗಳೂರು, ಫೆ.28-ಎರಡು ಬಿಎಂಟಿಸಿ ಬಸ್‌ಗಳ ನಡುವೆ ಆಟೋ ಸಿಲುಕಿ ಚಾಲಕ ಹಾಗೂ ಪ್ರಯಾಣಿಕ ದಾರುಣವಾಗಿ ಮೃತಪಟ್ಟಿರುವ ಘಟನೆ ನಗರದ ಬನಶಂಕರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.
ಆಟೋ ಚಾಲಕ ವಿಜಯ್ ಕುಮಾರ್(50) ಹಾಗೂ ಪ್ರಯಾಣಿಕ ವಿಷ್ಣುಬಾಟಿಯ (70) ಎಂದು ಗುರುತಿಸಲಾಗಿದ್ದು, ಇವರು ಎಲ್ಲಿಯ ನಿವಾಸಿಗಳೆಂಬುವುದು ಸದ್ಯಕ್ಕೆ ತಿಳಿದುಬಂದಿಲ್ಲ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಹೊಸಕೆರೆ ಹಳ್ಳಿ ಕ್ರಾಸ್ ಸೀತಾ ಸರ್ಕಲ್ ಸಮೀಪ ಮುಂದೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಇದರ ಹಿಂದೆ ಬರುತ್ತಿದ್ದ ಆಟೋ ಬಸ್‌ಗೆ ಡಿಕ್ಕಿ ಹೊಡೆದಿದೆ.
ಅದೇ ವೇಳೆಗೆ ಹಿಂದೆ ಬರುತ್ತಿದ್ದ ಬಿಎಂಟಿಸಿ ಬಸ್ ಆಟೋಗೆ ಡಿಕ್ಕಿ ಹೊಡೆದಿದ್ದರಿಂದ ಎರಡು ಬಸ್‌ಗಳ ಮಧ್ಯೆ ಆಟೋ ಸಿಲುಕಿ ಅಪ್ಪಚ್ಚಿಯಾಗಿ ಚಾಲಕ ಹಾಗೂ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಬನಶಂಕರಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿ ಆಟೋದಲ್ಲಿ ಸಿಲುಕಿಗೊಂಡು ಮೃತಪಟ್ಟ ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಪಘಾತದಿಂದಾಗಿ ಸೀತಾ ಸರ್ಕಲ್ ಬಳಿ ಕೆಲ ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸಂಚಾರಿ ಪೊಲೀಸರು ಸ್ಥಳದಲ್ಲಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.