ಬೆಂಗಳೂರು, ಮಾ. 1- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀಹೆಬ್ಬಾಳ್ಳರ್ ಹಾಗೂ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರ ನಡುವಿನ ಪ್ರಕರಣವನ್ನು ಈ ಅಧಿವೇಶನದಲ್ಲಿ ಸೌಹಾರ್ದಯುತವಾಗಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್ ಕಲಾಪ ನಡೆಯುವ ವೇಳೆ ಈ ಘಟನೆ ನಡೆದಿದ್ದರೆ ಅಸಂಸದೀಯ ಪದಬಳಕೆ ಎಂದು ಕಡತದಿಂದ ತೆಗೆದುಹಾಕುವ ಮೂಲಕ ಪ್ರಕರಣವನ್ನು ಅಲ್ಲಿಯೇ ಮುಕ್ತಾಯಗೊಳಿಸಬಹುದಿತ್ತು. ಅಧಿವೇಶನ ನಡೆಯದ ವೇಳೆ ಘಟನೆಯಾಗಿದೆ. ಅದು ಕೂಡ ವಿಧಾನಪರಿಷತ್‌ನ ಸಭಾಂಗಣದ ಒಳಗೆ ನಡೆದಿರುವುದರಿಂದ ವಿವಾದಗಳು ತಲೆ ಎತ್ತಿವೆ.
ಪ್ರಕರಣವನ್ನು ನೈತಿಕ ಸಮಿತಿಗೆ ಒಪ್ಪಿಸಲಾಗಿದೆ. ಅಲ್ಲಿ ಇಬ್ಬರನ್ನೂ ಕರೆಸಿ ಪರಸ್ಪರ ಮಾತುಕತೆಯ ಮೂಲಕ ಒಳ್ಳೆಯ ರೀತಿಯಲ್ಲಿ ಬಗೆಹರಿಸಲು ಪ್ರಯತ್ನಿಸುತ್ತೇವೆ. ಒಂದು ವೇಳೆ ಅದು ಸಾಧ್ಯವಾಗದೇ ಇದ್ದರೆ ಪಿ.ಎಚ್.ಪೂಜಾರ್ ಅವರ ಅಧ್ಯಕ್ಷತೆಯ ನೈತಿಕ ಸಮಿತಿ ನೀಡುವ ವರದಿಯಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಒಂದು ತಿಂಗಳ ಒಳಗಾಗಿ ವರದಿ ನೀಡುವಂತೆಯೂ ಸೂಚಿಸಿದ್ದೇವೆ ಎಂದರು.
ಇದೇ ವೇಳೆ ಉತ್ತರ ಪ್ರದೇಶದ ಘಟನೆಯೊಂದನ್ನು ಪ್ರಸ್ತಾಪಿಸಿದ ಹೊರಟ್ಟಿಯವರು 1965 ರಲ್ಲಿ ಸದಸ್ಯರೊಬ್ಬರು ಸಭಾಪತಿಯವರ ವಿರುದ್ದ ದಿಕ್ಕಿಗೆ ತಿರುಗಿ ನಮಸ್ಕಾರ ಹಾಕಿದ್ದರು. ಇದಕ್ಕಾಗಿ ಆ ಸದಸ್ಯರನ್ನು ಅಮಾನತುಗೊಳಿಸಿ 8 ದಿನ ಜೈಲು ಶಿಕ್ಷೆ ವಿಧಿಸಿ ಸಭಾಪತಿ ಆದೇಶ ನೀಡಿದ್ದರು.
ಸದಸ್ಯ ನ್ಯಾಯಾಲಯಕ್ಕೆ ಹೋಗಿ ಆದೇಶಕ್ಕೆ ತಡೆಯಾಜ್ಞೆ ತಂದು ಮುಂದುವರೆದ ಸಭಾವತಿಯವರು ನ್ಯಾಯಾಧೀಶರ ಬಂಧನಕ್ಕೆ ಆದೇಶ ಹೊರಡಿಸಿದ್ದರು. ಕೊನೆಗೆ ನ್ಯಾಯಾಧೀಶರಿಗೆ ಹೆದರಿ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ಮನೆಯಲ್ಲಿ ಅಡಗಿಕೊಂಡಿದ್ದರು.
ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ಮನೆಯಲ್ಲಿದ್ದಾಗ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಒಂದಷ್ಟು ವಿಳಂಬವಾಗಿತ್ತು. ಕೊನೆಗೆ ಅದು ರಾಷ್ಟ್ರಪತಿ ಅಂಗಳಕ್ಕೂ ಹೋಗಿತ್ತು. ಸಭಾಪತಿಯವರ ತೀರ್ಪೇ ಅಂತಿಮ ಎಂದು ನ್ಯಾಯಾಲಯ ಪುನರ್ ಆದೇಶ ಹೊರಡಿಸಿದ್ದರಿಂದ ವಿವಾದಕ್ಕೊಳಗಾದ ಸದಸ್ಯ ಜೈಲುಶಿಕ್ಷೆ ಅನುಭವಿಸಲೇಬೇಕಾಯಿತು. ಆಗೆಲ್ಲಾ ಸಭಾಪತಿಯವರ ಮಾತೇ ಅಂತಿಮ ಎಂಬಂತಿತ್ತು. ಆದರೆ ಈಗ ಪರಿಸ್ಥಿತಿ ಹಾಗೆ ಇಲ್ಲ ಎಂದು ವಿಷಾದಿಸಿದರು.
ನೈತಿಕ ಸಮಿತಿಗೆ ಸಿ.ಟಿ.ರವಿ ಈ ಮೊದಲು ಅಧ್ಯಕ್ಷರಿದ್ದರು. ಘಟನೆಯಾದ ತಕ್ಷಣವೇ ಅವರನ್ನು ಬದಲಾವಣೆ ಮಾಡಿ ಪಿ.ಎಚ್.ಪೂಜಾರ್ ಅವರನ್ನು ನೇಮಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ವಿಧಾನಪರಿಷತ್‌ಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷ 4 ಮಂದಿ ಸದಸ್ಯರನ್ನು ನೇಮಿಸಿದರೆ ಬಹುಮತ ಪಡೆದುಕೊಳ್ಳುತ್ತದೆ.
ಒಂದು ವೇಳೆ ಆಗ ತಮ್ಮ ವಿರುದ್ಧ ಅವಿಶ್ವಾಸ ಸೂಚನೆ ನೀಡಿದರೆ ರಾಜೀನಾಮೆ ನೀಡಿ ಮನೆಗೆ ಹೋಗುತ್ತೇನೆ. ನನಗೆ ಯಾವುದೇ ಅಧಿಕಾರದ ವ್ಯಾಮೋಹ ಇಲ್ಲ. ಸಾಮಾನ್ಯ ಕುಟುಂಬದಿಂದ ಬಂದವನು. ಶಿಕ್ಷಕನಾಗಿದ್ದ ನಾನು ಸಚಿವನಾಗಿ, ಸಭಾವತಿಯಂತಹ ಉನ್ನತ ಹುದ್ದೆಯಲ್ಲಿದ್ದೇನೆ. ನನಗೆ ಈ ಬಗ್ಗೆ ತೃಪ್ತಿ ಇದೆ ಎಂದರು.
ಈ ಮೊದಲು ವಿಧಾನಮಂಡಲದ ಕಾರ್ಯಕಲಾಪ ಪಟ್ಟಿಯ ಜೊತೆಯಲ್ಲೇ ವಿಧೇಯಕಗಳ ಅಜೆಂಡಾವೂ ಸೇರುತ್ತಿತ್ತು. ಅವುಗಳ ಅಧ್ಯಯನಕ್ಕೆ ಶಾಸಕರಿಗೆ ಸಾಕಷ್ಟು ಸಮಯ ಸಿಗುತ್ತಿತ್ತು. ಈಗ ತರಾತುರಿಯಲ್ಲಿ ಮಸೂದೆಗಳನ್ನು ಕಳುಹಿಸುತ್ತಿದ್ದಾರೆ. ಹೀಗಾಗಿ ಅಧ್ಯಯನಕ್ಕೆ ಅವಕಾಶವೇ ಸಿಗುತ್ತಿಲ್ಲ. ಮೊದಲು ವಿಧಾನಪರಿಷತ್, ವಿಧಾನಸಭೆಗಿಂತ ಒಂದು ದಿನ ತಡವಾಗಿ ಆರಂಭವಾಗುತ್ತಿದ್ದವು. ಒಂದು ದಿನ ತಡವಾಗಿ ಮುಗಿಯುತ್ತಿತ್ತು. ಆದರೆ ಈಗ ಕಾಲಮಾನವೂ ಬದಲಾಗಿದೆ ಎಂದರು.
ವಿಧೇಯಕಗಳನ್ನು ಮುಂಚಿತವಾಗಿ ಕಳುಹಿಸಬೇಕು. ಇಲ್ಲವಾದರೆ ಚರ್ಚೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಸರ್ಕಾರಕ್ಕೆ ತಿಳಿಸಿದ್ದೇನೆ. ಅಧಿಕಾರಿಗಳು ಯಾರ ಮಾತು ಕೇಳುತ್ತಾರೋ, ಕೇಳುವುದಿಲ್ಲವೋ ಗೊತ್ತಾಗುತ್ತಿಲ್ಲ. ವಿಧಾನಸಭೆಯಲ್ಲಿ ಬೆಳಿಗ್ಗೆ ಪರಿಷತ್ತಿನಲ್ಲಿ ಸಂಜೆ ಚರ್ಚೆ ಎಂಬ ವಾತಾವರಣ ಇದೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಮಂಡಲದಲ್ಲಿ ಚರ್ಚೆಯ ಗುಣಮಟ್ಟ ಮೊದಲಿನಂತಿಲ್ಲ. ಈ ಮೊದಲು ಬಹುತೇಕ ಶಾಸಕರು ಶಾಸಕರ ಭವನದಲ್ಲೇ ಉಳಿಯುತ್ತಿದ್ದರು. ಅಧಿವೇಶನ ಮುಗಿದರೆ ಶಾಲಾ ಮಕ್ಕಳಂತೆ ಸಾಲುಗಟ್ಟಿ ಹೋಗುತ್ತಿದ್ದರು. ಈಗ ಎಲ್ಲರೂ ಬದಲಾಗಿದ್ದಾರೆ. ಒಂದೇ ದಿನ 22 ವಿಧೇಯಕಗಳನ್ನು ಅಂಗೀಕರಿಸಿದ ಉದಾಹರಣೆಗಳಿವೆ. ಶಾಸಕರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಬಾರಿ ಉತ್ತಮವಾಗಿ ಅಧಿವೇಶನ ನಡೆಸುತ್ತೇವೆ. ಚರ್ಚೆಯ ಗುಣಮಟ್ಟವೂ ಉತ್ತಮವಾಗಿರುತ್ತದೆ ಎಂದರು.