ಕೊಳ್ಳೇಗಾಲ, ಮಾ.1- ಕಾರು ಮತ್ತು ಟಿಪ್ಪರ್ ವಾಹನದ ನಡುವೆ ಇಂದು ಬೆಳಗ್ಗೆ ಭೀಕರ ಅಪಘಾತ ಸಂಭವಿಸಿ ಐದು ಮಂದಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಮೈಸೂರಿನ ಹಾಲನಹಳ್ಳಿಯ ಶ್ರೀಲಕ್ಷ್ಮೀ, ಪಿರಿಯಾಪಟ್ಟಣದ ಶ್ಯಾನಭೋಗನ ಹಳ್ಳಿಯ ನಿಖಿತ್, ಮಂಡ್ಯದ ಸುಹಾಸ್, ಮದ್ದೂರು ತಾಲೂಕಿನ ಹಲ್ಲಿಗೆರೆಯ ಶ್ರೇಯಸ್, ಮದ್ದೂರು ತಾಲೂಕಿನ ಲಕ್ಷ್ಮೀ ಗೌಡನ ದೊಡ್ಡಿ ನಿವಾಸಿ ನಿತಿನ್ ಮೃತಪಟ್ಟವರು.
ಈ ಐದು ಮಂದಿ ಸ್ನೇಹಿತರಾಗಿದ್ದು, ಇವರೆಲ್ಲರೂ 20 ರಿಂದ 23 ವಯೋಮಾನದವರು. ಈ ಪೈಕಿ ನಾಲ್ಕು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದು, ಮತ್ತೊಬ್ಬ ಡಿಪ್ಲೋಮಾ ವ್ಯಾಸಂಗ ಮಾಡಿದ್ದಾನೆ. ಈ ಐದು ಮಂದಿ ಇಂದು ಬೆಳಗ್ಗೆ ಸ್ವಿಫ್ಟ್ ಕಾರಿನಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಮಹಾರಥೋತ್ಸವದಲ್ಲಿ ಪಾಲ್ಗೊಳ್ಳಲು ಮಂಡ್ಯದಿಂದ ಹೋಗುತ್ತಿದ್ದರು.
ಬೆಳಗ್ಗೆ 9.30 ರ ಸುಮಾರಿನಲ್ಲಿ ಇವರ ಕಾರು ಕೊಳ್ಳೇಗಾಲ- ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯ ಮದುವನಹಳ್ಳಿ ಸಮೀಪ ಬೆಟ್ಟಕ್ಕೆ ಹೋಗುತ್ತಿದ್ದಾಗ ಎದುರಿನಿಂದ ಅತಿವೇಗವಾಗಿ ಬಂದ ಟಿಪ್ಪರ್ ವಾಹನ ಇವರ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿ ರಸ್ತೆಯ ಬದಿಯ ಗದ್ದೆಗೆ ಉರುಳಿ ಬಿದ್ದಿದ್ದು ಕಾರಿನಲ್ಲಿದ್ದ ಐದು ಮಂದಿ ಕಾರಿನೊಳಗೆ ಉಸಿರು ಚೆಲ್ಲಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. ಕಾರಿನೊಳಗೆ ಸಿಕ್ಕಿಕೊಂಡಿದ್ದ ಐದು ಮಂದಿಯ ಮೃತದೇಹಗಳನ್ನು ಹೊರ ತೆಗೆದು ಕೊಳ್ಳೇಗಾಲ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ. ಸ್ಥಳಕ್ಕೆ ಎಸ್‌ಪಿ ಡಾ.ಕವಿತಾ ಅವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಳ್ಳೇಗಾಲದ ಮಲೆ ಮಹದೇಶ್ವರ ಬೆಟ್ಟದ ರಸ್ತೆಯನ್ನು ಕೆಸಿಎಫ್ ಯೋಜನೆಯಡಿ ಅಭಿವೃದ್ಧಿ ಪಡಿಸಿರುವುದರಿಂದ ವಾಹನ ಸವಾರರು ತಮ್ಮ ವಾಹನಗಳನ್ನು ಅತೀ ವೇಗವಾಗಿ ಚಲಾಯಿಸುವುದರಿಂದ ಆಗಿಂದಾಗ್ಗೆ ಈ ರಸ್ತೆಯಲ್ಲಿ ಭೀಕರ ಅಪಘಾತಗಳು ಸಂಭವಿಸಿ ಸಾವು ನೋವುಗಳಾಗುತ್ತಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ತಡೆಗೋಡೆ ಇಲ್ಲ: ರಸ್ತೆ ಅಭಿವೃದ್ಧಿ ಪಡಿಸಿರುವ ಕೆಸಿಎಫ್ ಯೋಜನೆ ಅಧಿಕಾರಿಗಳು ರಸ್ತೆ ಅಭಿವೃದ್ಧಿ ವೇಳೆ ಈ ರಸ್ತೆಯಲ್ಲಿ ಅಲ್ಲಲ್ಲಿ ಸುಮಾರು 6ರಿಂದ 8 ಅಡಿಗಳ ಎತ್ತರಕ್ಕೆ ಎತ್ತರಿಸಿದ್ದಾರೆ. ಆದರೆ ಇಕ್ಕಲಗಳಲ್ಲಿ ತಡೆಗೋಡೆ ನಿರ್ಮಿಸಿಲ್ಲ. ಇದರಿಂದಾಗಿ ಅತಿವೇಗವಾಗಿ ಚಲಿಸುವ ಬಹುತೇಕ ವಾಹನಗಳು ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದು, ಸಂಭವಿಸುತ್ತಿರುತ್ತವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಜನ ಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸುವುದರ ಮೂಲಕ ಅಪಘಾತಗಳನ್ನು ತಪ್ಪಿಸುವಂತೆ ಮನವಿ ಮಾಡಿದ್ದಾರೆ..