ಬೆಂಗಳೂರು, ಮಾ.1- ರಾಹುಲ್ ಗಾಂಧಿ ಯಾರು ಎಂದು ತಮಗೆ ಗೊತ್ತಿಲ್ಲ ಎಂದು ಹೇಳಿದ ಸದ್ಗುರು ಜಗದೀಶ್ ವಾಸುದೇವ್ ಜೊತೆ ವೇದಿಕೆ ಹಂಚಿಕೊಂಡಿರುವುದರ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಸ್ಪಷ್ಟನೆ ನೀಡಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಮಹಾಶಿವರಾತ್ರಿ ಆಚರಣೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಷಾ ಕೂಡ ಪಾಲ್ಗೊಂಡಿದ್ದರು. ಈ ಕುರಿತಂತೆ ರಾಜಕೀಯವಾಗಿ ಭಾರೀ ಚರ್ಚೆಗಳಾದವು.
ಡಿ.ಕೆ.ಶಿವಕುಮಾರ್ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬೆಲ್ಲಾ ವ್ಯಾಖ್ಯಾನಗಳು ಕೇಳಿಬಂದವು. ಅದಕ್ಕೆ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿ ಕೂಡ ಆಗಿದೆ. ಸಂಪುಟದ ಬಹುತೇಕ ಸಚಿವರು ಡಿ.ಕೆ.ಶಿವಕುಮಾರ್ ನಡೆಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಅವರವರ ನಂಬಿಕೆಗಳು, ಆಚರಣೆಗಳು ಅವರ ಸ್ವಂತಕ್ಕೆ ಸೇರಿವೆ. ಡಿ.ಕೆ.ಶಿವಕುಮಾರ್ ಕಟ್ಟಾ ಕಾಂಗ್ರೆಸ್ಸಿಗರು. ಅವರು ಪಕ್ಷಾಂತರ ಮಾಡುತ್ತಾರೆ ಎಂಬುದೇ ಹಾಸ್ಯಾಸ್ಪದ ವ್ಯಾಖ್ಯಾನ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ರಾಜಣ್ಣ ಪ್ರತಿಕ್ರಿಯಿಸಿದ್ದಾರೆ. ಡಿ.ಕೆ.ಶಿವಕುಮಾರ್‌ರವರು ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳಲಿ. ಆದರೆ ರಾಹುಲ್ ಗಾಂಧಿ ಯಾರು ಎಂದು ನನಗೆ ಗೊತ್ತಿಲ್ಲ ಎಂದು ಹೇಳಿದ್ದ ಸದ್ಗುರು ಜೊತೆ ವೇದಿಕೆ ಹಂಚಿಕೊಂಡಿರುವುದರ ಬಗ್ಗೆ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಬೇಕು ಎಂದರು.
ರಾಜಕಾರಣದಲ್ಲಿ ಯಾರಾರು, ಏನೇನು ಮಾತನಾಡುತ್ತಾರೆ ಎಂಬುದು ನನಗಿಂತಲೂ ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚಿನ ಮಾಹಿತಿ ಇರುತ್ತದೆ ಎಂದು ಹೇಳಿದರು. ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಸೃಷ್ಟಿಯಾಗಿರುವ ಗೊಂದಲ ಶೀಘ್ರವೇ ಬಗೆಹರಿಯಲಿದೆ. ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಡುವೆ ಮಾತುಕತೆಯಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಎಲ್ಲವೂ ಬಗೆಹರಿಯುತ್ತದೆ ಎಂದು ತಿಳಿಸಿದರು.