ಬೆಂಗಳೂರು, ಮಾ.1- ರಾಜ್ಯಸರ್ಕಾರದ ಅದರಲ್ಲೂ ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿ ವಿವಾದ ಸೃಷ್ಟಿಸಿದ್ದ ಉದ್ಯಮಿ ಮೋಹನ್ ದಾಸ್ ಪೈ ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಇತ್ತೀಚೆಗೆ ಮೋಹನ್‌ದಾಸ್ ಪೈ ಅವರ ಸಾಮಾಜಿಕ ಜಾಲತಾಣಗಳ ಸಂದೇಶಗಳು ಸಾಕಷ್ಟು ವಿವಾದ ಸೃಷ್ಟಿಸಿದ್ದವು. ಇದಕ್ಕೆ ಕಾಂಗ್ರೆಸ್‌ನಿಂದ ಸಚಿವರಾದ ಎಂ.ಬಿ.ಪಾಟೀಲ್, ಖುದ್ದು ಡಿ.ಕೆ.ಶಿವಕುಮಾರ್ ಕೂಡ ಅಸಮಾಧಾನ ಹೊರಹಾಕಿದ್ದರು.
ರಾಜ್ಯದಲ್ಲಿ ಐಟಿಬಿಟಿ ಬೆಳೆಯಲು ಉದ್ಯಮಿಗಳ ಪಾತ್ರ ಮಹತ್ವದ್ದಾಗಿದೆ. ಹಾಗೆಯೇ ಸರ್ಕಾರದ ಬೆಂಬಲವೂ ಕೂಡ ಗಮನಾರ್ಹ. ಮೋಹನ್ ದಾಸ್ ಪೈ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಲು ಲಾಬಿ ನಡೆಸುತ್ತಿದ್ದು, ಹೈಕಮಾಂಡ್ ಅನ್ನು ಮೆಚ್ಚಿಸಲು ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎಂದು ಸಚಿವರುಗಳು ತಿರುಗೇಟು ನೀಡಿದರು.
ಮೂಲಭೂತ ಸೌಕರ್ಯಗಳ ಕೊರತೆಯಿದ್ದರೆ ತಮ್ಮ ಗಮನಕ್ಕೆ ತರಬಹುದು, ಪರಿಸ್ಥಿತಿ ಸುಧಾರಿಸಲು ನಾವು ಕ್ರಮ ಕೈಗೊಳ್ಳುತ್ತೇವೆ. ಅದರ ಬದಲು ರಾಜಕೀಯದ ಕಾರಣಕ್ಕೆ ಟೀಕೆ ಮಾಡಿ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಸಚಿವರು ಆಕ್ಷೇಪ ವ್ಯಕ್ತಪಡಿಸಿದರು.
ಕೊನೆಗೆ ಇಂದು ಮೋಹನ್ ದಾಸ್ ಪೈ ಅವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡುವ ಮೂಲಕ ತೀವ್ರ ಕುತೂಹಲ ಕೆರಳಿಸಿದ್ದಾರೆ. ಇನ್ನು ಮುಂದೆ ಮೋಹನ್‌ದಾಸ್ ಅವರ ಟೀಕೆಗಳು ನಿಲ್ಲಲಿವೆಯೇ ಎಂಬ ಕುತೂಹಲ ಕೆರಳಿದೆ.