Saturday, March 1, 2025
Homeರಾಜ್ಯಮರಾಠಿಗರ ಪುಂಡಾಟ ಖಂಡಿಸಿ ಕರ್ನಾಟಕ ಬಂದ್ ಬೆಂಬಲಕ್ಕೆ ಆಗ್ರಹಿಸಿ ವಾಟಾಳ್ ಪ್ರತಿಭಟನೆ

ಮರಾಠಿಗರ ಪುಂಡಾಟ ಖಂಡಿಸಿ ಕರ್ನಾಟಕ ಬಂದ್ ಬೆಂಬಲಕ್ಕೆ ಆಗ್ರಹಿಸಿ ವಾಟಾಳ್ ಪ್ರತಿಭಟನೆ

Vatal protests demanding support for Karnataka bandh

ಬೆಂಗಳೂರು,ಮಾ.1- ಮರಾಠಿಗರ ಪುಂಡಾಟ, ಅಟ್ಟಹಾಸ ನಿಲ್ಲಬೇಕು. ಕನ್ನಡಿಗರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು. ಎಂಇಎಸ್ ನಿಷೇಧ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಂಡ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿರುವ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ರಾಮನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಕಳಸಾ ಬಂಡೂರಿ ಮಹದಾಯಿ ಯೋಜನೆ ಕಾರ್ಯಗತವಾಗಬೇಕು. ಮೇಕೆದಾಟು ಯೋಜನೆ ಅನುಷ್ಠಾನ ಮಾಡಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡಬೇಕೆಂದು ವಾಟಾಳ್ ನಾಗರಾಜ್ ಈ ಸಂದರ್ಭದಲ್ಲಿ ಒತ್ತಾಯಿಸಿದರು.

ನಿರ್ವಾಹಕನ ಮೇಲೆ ಮರಾಠಿಗರು ದಾಳಿ ನಡೆಸಿದ ಕ್ರಮವನ್ನು ಖಂಡಿಸಿದ ವಾಟಾಳ್ ನಾಗರಾಜ್‌ರವರು ಹಲ್ಲೆ ಮಾಡಿದ ದುರುಳರನ್ನು ಬಂಧಿಸಿ ಗಡೀಪಾರು ಮಾಡಬೇಕೆಂದು ಒತ್ತಾಯಿಸಿದರು. ಈ ಎಲ್ಲಾ ಸಮಗ್ರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇದೇ 22ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದೇವೆ. ಎಲ್ಲಾ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ನಾಗರಿಕ ಸಂಘಟನೆಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಅದಕ್ಕೂ ಮುನ್ನ ಹೊಸೂರು ಗಡಿ ಬಂದ್, ಬೆಳಗಾವಿ ಚಲೋ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುವುದು ಎಂದು ಅವರು ಹೇಳಿದರು. ಡಾ.ರಾಜ್‌ಕುಮಾ‌ರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆಯ ಕೆ.ಆರ್.ಕುಮಾರ್, ಕರವೇ ಮುಖಂಡರಾದ ಶಿವರಾಮೇಗೌಡ, ಪ್ರವೀಣ್‌ ಕುಮಾರ್‌ಶೆಟ್ಟಿ, ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್ ದೇವ್, ಎಚ್.ವಿ.ಗಿರೀಶ್‌ ಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News