ಬೆಂಗಳೂರು, ಮಾ.2- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲ ಧಗೆ ಹೆಚ್ಚಾಗುತ್ತಿದ್ದು ಸೂರ್ಯನ ಶಾಖಕ್ಕೆ ಜನರು ತತ್ತರಿಸಿದ್ದು ದಾಹ ತಣಿಸಿ ಕೊಳ್ಳಲು ಜನರು ತಂಪು ಪಾನಿಯಗಳತ್ತ ಮುಖ ಮಾಡಿದ್ದು ನೈಸರ್ಗಿಕ ಪಾನೀಯ ಎಳನೀರು ಬೆಲೆ 60 ರೂ. ತಲುಪಿದೆ. ಶಿವರಾತ್ರಿ ಕಳೆಯುತ್ತಿದ್ದಂತೆ ಬಿಸಿಲಿನ ತಾಪ ಏರುತ್ತಿದ್ದು ಜನರು ಪ್ರಾರಂಭದ ಬಿಸಿಲಿಗೆ ಬಸವಳಿಯುತ್ತಿದ್ದು ಇನ್ನೂ ಎರಡು ತಿಂಗಳು ಬಿಸಿಲು ಇರಲಿದ್ದು ದಿನ ಕಳೆಯುವುದು ಹೇಗೆ ಎಂದು ಚಿಂತೆ ಎದುರಾಗಿದೆ.
ಬೇಸಿಗೆಯಲ್ಲಿ ಅಷ್ಟಾಗಿ ಊಟ-ತಿಂಡಿ ಸೇರುವುದಿಲ್ಲ, ಬರಿ ನೀರು ಕುಡಿದೆ ಹೊಟ್ಟೆ ತುಂಬಿ ಹೋಗುತ್ತಿದೆ. ಬೆಳಗ್ಗೆ ಎಂಟು ಗಂಟೆಗಾಗಲೆ ಬಿಸಿಲು ಜೋರಾಗಿರುತ್ತದೆ. ಇನ್ನು ಮಧ್ಯಾಹ್ನ ಮನೆಯಿಂದ ಹೊರಬಾರದಷ್ಟು ಬಿಸಿಲು ಇರುತ್ತದೆ. ಜೊತೆಗೆ ಬಿಸಿಗಾಳಿ ಇದರಿಂದ ಹೊರಗಡೆ ಕೆಲಸ ಕಾರ್ಯ ಮಾಡುವವರ ಸೆಕೆ ಮತ್ತು ಬಿಸಿಲಿಗೆ ಹೈರಾಣಾಗಿದ್ದಾರೆ.
ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ಜನರು ದಾಹ ತಣಿಸಿಕೊಳ್ಳಲು ತಂಪು ಪಾನೀಯಗಳತ್ತ ಮುಖ ಮಾಡಿದ್ದು ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ಬಿಸಿಲಿನಂತೆ ಬೆಲೆಯೂ ಸಹ ಅಷ್ಟೆ ಹೆಚ್ಚಾಗಿದೆ, ಕಳೆದ ಒಂದು ತಿಂಗಳ ಹಿಂದೆ ಬೆಂಗಳೂರಿನಲ್ಲಿ 30 ರೂ.ಗೆ ಸಿಗುತ್ತಿದ್ದ ಎಳನೀರು ಈಗ ಬರೋಬ್ಬರಿ 60 ರೂ. ತಲುಪಿದೆ. ಮಂಡ್ಯ, ಮದ್ದೂರು, ತುಮಕೂರು, ರಾಮನಗರ, ಮಾಗಡಿ ಸೇರಿದಂತೆ ಮತ್ತಿತರ ಕಡೆಯಿಂದ ಎಳನೀರು ಬರುತ್ತಿದೆ. ಆದರೆ ಬೇಡಿಕೆ ಹೆಚ್ಚಾಗಿದ್ದು ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿಲ್ಲ.
ಕಳೆದ ವರ್ಷವೂ ಕೂಡ ಬಿಸಿಲ ಬೇಗೆ ಹೆಚ್ಚಾಗಿದ್ದು ತೆಂಗಿನ ಮರಗಳು ನೀರಿಲ್ಲದೆ ಒಣಗಿ ಹೋಗಿದ್ದವು. ನಂತರ ಮಳೆ ಬಂದ ಮೇಲೆ ಮತ್ತೆ ಚಿಗುರಿ ಜೀವ ಉಳಿಸಿಕೊಂಡಿರುವ ಮರಗಳಲ್ಲಿ ಅಷ್ಟಾಗಿ ಎಳನೀರು ಫಸಲು ಬಂದಿಲ್ಲ. ಜೊತೆಗೆ ರೋಗಬಾಧೆಯಿಂದಲೂ ಸಹ ಇಳುವರಿ ಕುಂಠಿತವಾಗಿದ್ದು ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಾಲು ಬಾರುತ್ತಿಲ್ಲ.
ಇದರಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗುತ್ತಿದ್ದು ಕೃತಕ ಪಾನೀಯಗಳಿಗಿಂತ ಜೋತೆಗೆ ರಸಾಯನಿಕ ಮುಕ್ತ ಹಾಗೂ ಯಾವುದೇ ಕಲಬೆರಿಕೆ ಮಾಡಲು ಸಾಧ್ಯವಾಗದ ಉತ್ತಮ ಔಷಧಿಗುಣಗಳನ್ನು ಹೊಂದಿರುವ ದೇಹವನ್ನು ತಂಪಾಗಿರಿಸುವ ನೈಸರ್ಗಿಕ ಪಾನೀಯವಾದ ಎಳನೀರು ಸೇವನೆ ಮಾಡುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಒಂದು ಎಳನೀರು 30 ರೂ.ಗೆ ಸಿಕ್ಕರೂ ಸಹ ಸಾಗಾಟ, ಕೊಯ್ದು ಮಾಡುವುದು, ಕೂಲಿ ಎಲ್ಲಾ ಸೇರಿ ಬೆಂಗಳೂರಿಗೆ ಬರುವಷ್ಟರಲ್ಲಿ 60 ರೂ ಆಗುತ್ತಿದ್ದು ಇದರಲ್ಲಿ ರೈತರಿಗೆ ಸಿಗುವ ಲಾಭ ಅಷ್ಟಕ್ಕಷ್ಟೆ. ಇಲ್ಲಿ ವ್ಯಾಪಾರಿಗಳಿಗೆ ಲಾಭ ಗ್ರಾಹಕರ ಬೆಲೆ ಬಿಸಿತಟ್ಟಿದೆ.
ಮೇ ಅಂತ್ಯದವರೆಗೂ ರಾಜ್ಯದಲ್ಲಿ ಗರಿಷ್ಟ ಹಾಗೂ ಕನಿಷ್ಟ ತಾಪಮಾನವು ವಾಡಿಕೆಗಿಂತ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಜನರು ಆರೋಗ್ಯದತ್ತ ಗಮನ ಹರಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.