ಕಾರ್ಕಳ,ಮಾ.3- ಶಾಸಕ ಸುನಿಲ್‌ಕುಮಾರ್‌ಗೆ ಮಾತ್ರವಲ್ಲ, ಇಡೀ ರಾಜ್ಯದ ಬಿಜೆಪಿಗೆ ಉತ್ತರ ಕೊಡಲು ನಮ್ಮ ಸುಧೀರ್‌ಕುಮಾರ್ ಮುರೋಳಿಯವರು ಅತ್ಯಂತ ಸಮರ್ಥರಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಹೇಳಿದ್ದಾರೆ.
ಕಾರ್ಕಳದ ಗಾಂಧಿ ಮೈದಾನದಲ್ಲಿ ನಿನ್ನೆ ವೀರಪ್ಪಮೊಯ್ಲಿ ಅವರ ರಾಜಕೀಯ ಜೀವನಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕುಟುಂಬೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಸುನಿಲ್‌ಕುಮಾರ್‌ರವರಿಗೆ ತೀಕ್ಷವಾಗಿ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌ರವರು ಕಾಂಗ್ರೆಸ್ ಏನು ಮಾಡಿದೆ? ಎಂದು ಸುನಿಲ್ ಕುಮಾರ್ ಕೇಳಿದ್ದಾರೆ.
ಮಾಧ್ಯಮಗಳ ಮೂಲಕ ವೇದಿಕೆ ಸಜ್ಜುಗೊಳಿಸುತ್ತೇನೆ. ಸುನಿಲ್‌ಕುಮಾರ್ ಅವರನ್ನು ಆಹ್ವಾನಿಸುತ್ತೇವೆ. ಅವರು ಬರಲಿ, ಅವರಿಗೆ ಸುಧೀರ್‌ಕುಮಾರ್ ಮುರೋಳಿಯವರು ತಕ್ಕ ಉತ್ತರ ಕೊಡುತ್ತಾರೆ. ನಾವೇನು ಮಾಡಿದ್ದೇವೆ, ನಮ್ಮ ಪಕ್ಷದ ಇತಿಹಾಸ ಏನೆಂಬುದನ್ನು ಅವರೇ ಹೇಳುತ್ತಾರೆ. ಇಡೀ ರಾಜ್ಯದ ಬಿಜೆಪಿಗೆ ಉತ್ತರ ಕೊಡುವಷ್ಟು ಸಾಮರ್ಥ್ಯ ಅವರಿಗಿದೆ ಎಂದು ಅವರು ಹೇಳಿದರು.
ನಿನ್ನೆ ಕಾರ್ಯಕ್ರಮಕ್ಕೆ ಆಗಮಿಸುವಾಗ ಸುನಿಲ್‌ಕುಮಾರ್‌ರವರು ಹಿಂದುತ್ವದ ಭೂಮಿಗೆ ಸ್ವಾಗತ ಎಂದು ಹೇಳಿದ್ದಾರೆ. ಆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ತಮ್ಮ ಸಚಿವ ಸ್ಥಾನಕ್ಕೆ ಯಾಕೆ ರಾಜೀನಾಮೆ ನೀಡಿದರು ಎಂಬುದನ್ನು ಅವರು ಮೊದಲು ತಿಳಿದುಕೊಳ್ಳಲಿ. ತಮ್ಮ ಪಕ್ಷದಲ್ಲಿ ನಡೆಯುತ್ತಿರುವ ಸಂಘರ್ಷಗಳನ್ನು ಮೊದಲು ಸರಿಪಡಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಮುಂದಿನ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡುವ ಜವಾಬ್ದಾರಿ ನಿಮ್ಮದು ಎಂದು ಡಿ.ಕೆ.ಶಿವಕುಮಾರ್ ಕಾರ್ಯಕರ್ತರಿಗೆ ಮನವಿ ಮಾಡಿದರು.