ಬೆಂಗಳೂರು,ಮಾ.4- ಕರಾವಳಿ ಪ್ರವಾಸೋದ್ಯಮ ಹೆಚ್ಚು ಜನಪ್ರಿಯವಾಗಿದ್ದು, ವಾರ್ಷಿಕ 8 ಕೋಟಿ ಪ್ರವಾಸಿಗರು ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಗುರುರಾಜ ಶೆಟ್ಟಿ ಘಂಟಿಹೊಳೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಕರಾವಳಿ ಭಾಗವೂ ಒಳಗೊಂಡಂತೆ ಒಟ್ಟಾರೆ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ನ್ನು ಜಾರಿಗೆ ತರಲಾಗಿದೆ ಎಂದರು.
ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ತರುವ ಪ್ರಸ್ತಾವನೆ ಇಲ್ಲ. ಪ್ರವಾಸೋದ್ಯಮ ನೀತಿಯಲ್ಲೇ ಕರಾವಳಿ ಭಾಗದಲ್ಲಿನ ಎಲ್ಲಾ ವರ್ಗದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಅವಕಾಶಗಳನ್ನು ಕಲ್ಪಿಸಲಾಗಿದೆ. ಕರಾವಳಿ ಹಾಗೂ ಕಡಲತೀರ ಪ್ರದೇಶಕ್ಕೆ ವಿಶೇಷ ಮಹತ್ವ ನೀಡಲಾಗಿದೆ ಎಂದು ಹೇಳಿದರು.ಕರಾವಳಿ ಅಭಿವೃದ್ಧಿ ಮಂಡಳಿ ರಚನೆ ಮಾಡುತ್ತೇವೆ. ಭೂ ಬ್ಯಾಂಕ್ ಮಾಡುತ್ತೇವೆ. ಕಂಬಳಕ್ಕೆ ತಲಾ 5 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. 320 ಕಿ.ಮೀ. ಉದ್ದದ ಕರಾವಳಿಯಲ್ಲಿ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಹಕ್ಕುಗಳ ವರ್ಗಾಯಿಸಲು ಅನುವು ಮಾಡಿಕೊಡಲಾಗಿದೆ. ಸಾಹಸ, ಪರಿಸರ ಸ್ನೇಹಿ ವಸತಿ, ಸಂಸ್ಕøತಿ ಸೇರಿದಂತೆ ಪ್ರವಾಸಿಗರಿಗೆ ಪೂರೈಸುವ ಸೌಲಭ್ಯಗಳನ್ನು ಸಮಗ್ರ ಕರಾವಳಿ ಪ್ರವಾಸೋದ್ಯಮ ವಲಯಗಳು ಒಳಗೊಂಡಿವೆ. ಕರಾವಳಿಯಲ್ಲಿ ಕನಿಷ್ಟ 10 ಬೃಹತ್ ಪ್ರವಾಸೋದ್ಯಮ ಯೋಜನೆಗಳ ಅಭಿವೃದ್ಧಿಗೆ ಯೋಜನೆ ಮಾಡಲಾಗುತ್ತಿದೆ. ಕರಾವಳಿ ಉತ್ಸವಗಳಿಗೆ ಉತ್ತೇಜನ ನೀಡಲಾಗುತ್ತಿದೆ.
ಕಡಲ ತೀರಗಳಿಗೆ ಬ್ಲ್ಯೂ -Á್ಲಗ್ ಪ್ರಮಾಣ ಪತ್ರ ಪಡೆಯುವ ಗುರಿಯನ್ನು ಹೊಂದಲಾಗಿದೆ. ಕರಾವಳಿ ಕರ್ನಾಟಕದ ಯೋಜಿತ ಅಭಿವೃದ್ಧಿ ಯೋಜನೆ ಮತ್ತು ಸಿಆರ್‍ಜೆಡ್ ಮಾನದಂಡಗಳೊಂದಿಗೆ ಹೊಂದಾಣಿಕೆಗೆ ಒತ್ತು ನೀಡಲಾಗಿದೆ. ಹೀಗೆ 20 ಅಂಶಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಸಮುದ್ರದ ಮೇಲೆ ವಿಮಾನಗಳು ಇಳಿಸುವ ಬಗ್ಗೆ ಚಿಂತನೆ ನಡೆದಿದ್ದು, ರಷ್ಯಾದವರು ಆಸಕ್ತಿ ತೋರಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಕರಾವಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ, ಬಂದರುಗಳಿದ್ದು, ಆರೋಗ್ಯ, ಶಿಕ್ಷಣ, ಧಾರ್ಮಿಕ ಪ್ರವಾಸೋದ್ಯಮಕ್ಕೆ ಅವಕಾಶವಿದೆ. ಆದರೆ ಸೌಹಾರ್ದತೆಗೆ ಒತ್ತು ಕೊಡುವ ಕೆಲಸವನ್ನು ಶಾಸಕರು, ನಾವು, ನೀವೆಲ್ಲಾ ಮಾಡಬೇಕು. ಜನರನ್ನು ಪ್ರೀತಿಯಿಂದ ಬರುವಂತೆ ಮಾಡಬೇಕು. ಭಯ ಪಡಿಸುವಂತಾಗಬಾರದು ಎಂದು ಸಲಹೆ ಮಾಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕರಾವಳಿಯಲ್ಲಿ 7 ಗಂಟೆ ನಂತರ ಚಟುವಟಿಕೆಗಳು ಸ್ಥಗಿತವಾಗುತ್ತವೆ. ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಯುತ್ತವೆ. 2 ವರ್ಷದಿಂದ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿದೆ. ಅತೀ ಹೆಚ್ಚು ಇಂಜಿನಿಯರ್ ಮತ್ತು ಮೆಡಿಕಲ್ ಕಾಲೇಜುಗಳಿವೆ. ಶಿಕ್ಷಣ ಪಡೆದವರು ಮುಂಬೈ, ಬೆಂಗಳೂರು ಕಡೆ ಹೋಗುತ್ತಿದ್ದಾರೆ. ಇದನ್ನು ಸರಿಪಡಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕೊಡಿ. ಕರಾವಳಿ ಭಾಗದ ಶಾಸಕರ ಜೊತೆ ಪ್ರತ್ಯೇಕ ಸಭೆ ನಡೆಸುವುದಾಗಿ ಭರವಸೆ ನೀಡಿದರು.