ಬೆಂಗಳೂರು, ಮಾ.4- ಎತ್ತಿನ ಹೊಳೆ ಯೋಜನೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕುಡಿಯುವ ನೀರಿಗೆ ಆದ್ಯತೆ ನೀಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ವಿಧಾನ ಸಭೆಯ ಪ್ರಶ್ನೋತ್ತರದಲ್ಲಿ ವೆಂಕಟಶಿವಾ ರೆಡ್ಡಿ, ಎತ್ತಿನಹೊಳೆ ಹೊಳೆ ಯೋಜನೆ ಶುರುವಾಗಿದ್ದೆ ಮೂಲವಾಗಿ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ನೀರು ಹರಿಸಲು ಆರಂಭಿಸಲಾಯಿತು. ಆದರೆ ತುಮಕೂರು ಜಿಲ್ಲೆಯ ತಾಲ್ಲೂಕುಗಳ ಕೆರೆಗಳನ್ನು ತುಂಬಿಸಲಾಗುತ್ತಿದೆ. ಆ ಕಾರ್ಯಕ್ರಮವನ್ನೂ ಮುಂದೂಡಿ, ನಮ ಭಾಗಕ್ಕೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎತ್ತಿನಹೊಳೆಯ 24 ಟಿಎಂಸಿಯಲ್ಲಿ 18 ಟಿಎಂಸಿ ನೀರು ಬರುತ್ತದೆ. 16 ಟಿಎಂಸಿಯನ್ನು ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಬೇಕಿದೆ. ಕೆಲವು ಭಾಗದಲ್ಲಿ ಅರಣ್ಯ ಇಲಾಖೆಯವರು ಕೆಲಸ ಮಾಡಲು ಬಿಟ್ಟರೆ ಕೆಲಸ ಮುಂದುವರೆಯುತ್ತದೆ ಎಂದರು. ತಿಪಟೂರು, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಮಧುಗಿರಿ ತಾಲ್ಲೂಕುಗಳ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ, ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳಿಗೆ ನೀರು ಕೊಡುವುದಿಲ್ಲ ಎಂಬ ಆತಂಕ ಆ ಭಾಗಕ್ಕೆ ಇದೆ. ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಹರಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದರು.
ಬಂಗಾರಪೇಟೆ ಕ್ಷೇತ್ರದ ಆಡಳಿತ ಪಕ್ಷದ ಶಾಸಕರ ಎಸ್.ಎ.ನಾರಾಯಣಸ್ವಾಮಿ, ಸಣ್ಣ ನೀರಾವರಿ ಇಲಾಖೆಯಲ್ಲಿ ತಮ ಕ್ಷೇತ್ರಕ್ಕೆ ಏಳು ಕೋಟಿ ಮಾತ್ರ ಅನುದಾನ ಒದಗಿಸಲಾಗಿದೆ. ಖರ್ಚಾಗಿರುವುದು ಮಾತ್ರ 3.55 ಕೋಟಿ, 2021ರಿಂದ ಈವರೆಗೂ ಹಣ ಮಂಜೂರಾಗಿಲ್ಲ. ನಮ ಭಾಗದಲ್ಲಿ ನದಿ ಮೂಲಗಳಿಲ್ಲ. ಕೆರೆಗಳೇ ಜಲ ಮೂಲಗಳು ಹೆಚ್ಚಿನ ಅನುದಾನ ನೀಡಿ ಎಂದರು. ಕೆಸಿ ವ್ಯಾಲಿ ಎರಡನೇ ಹಂತದಲ್ಲಿ ಬೆಂಗಳೂರಿನಿಂದ 400 ಎಂಎಲ್‌ಡಿ ನೀರನ್ನು ಹರಿಸಬೇಕು ಎಂದು ಒಪ್ಪಂದವಾಗಿತ್ತು. ಮೊದಲ ಹಂತದಲ್ಲೂ ಸಮಪರ್ಕವಾಗಿ ನೀರು ಹರಿಸಲಾಗಿದೆ. ಅದರಿಂದ ಬರ ನಿಗಿದೆ, ಅಂತರ್ ಜಲ ಸುಧಾರಣೆಯಾಗಿತ್ತು. ಎರಡು ವರ್ಷದಿಂದ 280 ಎಂಎಲ್‌ಡಿ ಮಾತ್ರ ನೀರು ಹರಿಸಲಾಗುತ್ತಿದೆ. ನೀರಿನ ಕೊರತೆಯಾಗಿದೆ. ಜಿಲ್ಲೆಯ ಕೊನೆಯ ಭಾಗವಾಗಿರುವ ತಮ ಬಂಗಾರಪೇಟೆ ಕ್ಷೇತ್ರಕ್ಕೆ ನೀರೆ ತಲುಪುತ್ತಿಲ್ಲ , ನಾಲ್ಕು ವರ್ಷದಿಂದ ನೀರು ಸಿಕ್ಕಿಲ್ಲ. ಕೆಸಿ ವ್ಯಾಲಿ ಯೋಜನೆಯ ಉದ್ದೇಶ ಈಡೇರಿಲ್ಲ ಎಂದು ವಿವರಿಸಿದರು.
ಸಣ್ಣ ನೀರಾವರಿ ಸಚಿವರ ಎನ್.ಎಸ್.ಬೋಸರಾಜ್, ಕೆಸಿ ವ್ಯಾಲಿಯ ಜಾಕ್ ವೆಲ್ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ 2025ರ ಸೆಪ್ಟಂಬರ್ ವೇಳೆಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು.