ಲಕ್ನೋ, ಮಾ.5- ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಹಾಕುಂಭ ಆಯೋಜನೆಯನ್ನು ಪ್ರಶಂಸಿರುವುದನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅಲ್ಲಿನ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಮಹಾಕುಂಭ ಆಯೋಜನೆಯ ಕುರಿತು ಸಮಾಜವಾದಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆಯನ್ನು ಉಲ್ಲೇಖಿಸಿ ಅಖಿಲೇಶ್ ಯಾದವ್ ಅವರನ್ನು ತೀವ್ರ ತರಾಟೆಗೆ ತಗೆದುಕೊಂಡಿದ್ದಾರೆ.
ಡಿ.ಕೆ. ಶಿವಕುಮಾರ್ ಅವರಂತಹ ಅನೇಕ ನಾಯಕರು ಮಹಾಕುಂಭ ಮೇಳದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಿ, ಅದರ ಆಯೋಜನೆಯ ಕುರಿತು ಶ್ಲಾಘಿಸಿ ಮಾತನಾಡಿದ್ದಾರೆ. ಆದರೆ, ನೀವೂ ಅಖಿಲೇಶ್ ಯಾದವ್ ಸಹ ಅಲ್ಲಿಗೆ ಹೋಗಿದ್ದೀರಿ. ಅದು ನಿಮ್ಮ ನಂಬಿಕೆ. ಆದರೆ ನಿಮ್ಮ ಚಿಕ್ಕಪ್ಪ ಹೋಗಲು ಸಾಧ್ಯವಾಗಲಿಲ್ಲ.
ಆದ್ದರಿಂದ ನೀವು ನಿಮ್ಮ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಅವರನ್ನು ಮೆಚ್ಚಿಸಲು ಈ ರೀತಿಯ ಹೇಳಿಕೆ ನೀಡಿದ್ದೀರಾ ಎಂದು ಕಿಚಾಯಿಸಿದ್ದಾರೆ. 45 ದಿನದಲ್ಲಿ 66.30 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ. ಮಹಾಕುಂಭಮೇಳದಲ್ಲಿ ಮೂರೂವರೆ ಲಕ್ಷ ಕೋಟಿ ರೂಪಾಯಿಯ ವಹಿವಾಟು ನಡೆದಿದೆ.
130 ದೋಣಿಗಳ ನಾವಿಕರು 30 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ. ಕುಂಭಮೇಳದ ಅಚ್ಚುಕಟ್ಟು ವ್ಯವಸ್ಥೆ ಬಗ್ಗೆ ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ನನಗೆ ಕರೆ ಮಾಡಿ ಶ್ಲಾಘಿಸಿದ್ದಾರೆ ಎಂದು ಸದನಕ್ಕೆ ಸಿಎಂ ಯೋಗಿ ಮಾಹಿತಿ ನೀಡಿದ್ದಾರೆ.