Monday, March 10, 2025
Homeರಾಜ್ಯಕೇಂದ್ರದಿಂದ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಪಾಲು ಸಿಗದಿದ್ದರಿಂದ ರಾಜ್ಯದಲ್ಲಿ ಅಭಿವೃದ್ಧಿಗೆ ಗ್ರಹಣ : ನಯನಾ ಮೋಟಮ್ಮ

ಕೇಂದ್ರದಿಂದ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಪಾಲು ಸಿಗದಿದ್ದರಿಂದ ರಾಜ್ಯದಲ್ಲಿ ಅಭಿವೃದ್ಧಿಗೆ ಗ್ರಹಣ : ನಯನಾ ಮೋಟಮ್ಮ

Development in the state is hampered due to not getting the expected tax share from the Centre

ಬೆಂಗಳೂರು, ಮಾ.5- ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು ನಿರೀಕ್ಷಿತ ಮಟ್ಟದಲ್ಲಿ ರಾಜ್ಯಕ್ಕೆ ಬಾರದಿರುವುದರಿಂದ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷದ ಶಾಸಕರಾದ ನಯನಾ ಮೋಟಮ್ಮ ವಿಧಾನಸಭೆಯಲ್ಲಿ ತಿಳಿಸಿದರು.

ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, 1 ರೂಪಾಯಿ ತೆರಿಗೆ ಕೇಂದ್ರ ಸರ್ಕಾರಕ್ಕೆ ಪಾವತಿಯಾದರೆ 15 ಪೈಸೆಗಿಂತ ಕಡಿಮೆ ತೆರಿಗೆ ಪಾಲು ರಾಜ್ಯಕ್ಕೆ ಬರುತ್ತಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ಹೆಚ್ಚಿನ ಅನುದಾನಕ್ಕೆ ಒತ್ತಾಯ ಮಾಡಬೇಕು ಎಂದರು.

ರಾಜ್ಯದ ತೆರಿಗೆ ಪಾಲನ್ನು ನಾಡಿನ ಮತ್ತು ಜನರ ಹಿತಕ್ಕಾಗಿ ಕೇಂದ್ರ ಸರ್ಕಾರ ನೀಡಲು ಬಿಜೆಪಿಯವರು ದನಿ ಎತ್ತಬೇಕು. ಕನ್ನಡದ ಬೆಳವಣಿಗೆಗೆ, ಕನ್ನಡಪರ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆದರೆ ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಹೆಚ್ಚು ಮಾಡುತ್ತಿದೆ. ಅದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.

ಮುಂದಿನ ಬಜೆಟ್ ವೇಳೆಗೆ ರಾಜ್ಯದ ಆರ್ಥಿಕತೆ ಒಂದು ಟ್ರಿಲಿಯನ್‌ಗೆ ತಲುಪುವ ಸಾಧ್ಯತೆ ಇದೆ ಎಂದು ಹೇಳಿದರು. ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ವಿರೋಧಪಕ್ಷಗಳು ಟೀಕೆ ಮಾಡುತ್ತವೆ. ಆದರೆ ವಿಶ್ವಸಂಸ್ಥೆಯೇ ಮೆಚ್ಚುಗೆ ವ್ಯಕ್ತಪಡಿಸಿದೆ.

ಕಳೆದ 19 ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ 70 ಸಾವಿರ ಕೋಟಿ ರೂ. ಫಲಾನುಭವಿಗಳಿಗೆ ತಲುಪಿದೆ. ಚಿಕ್ಕಮಗಳೂರು, ಕೊಡಗು, ಧರ್ಮಸ್ಥಳದಲ್ಲಿ ವಿಮಾನನಿಲ್ದಾಣಕ್ಕೆ ಜಾಗ ಗುರುತಿಸಲಾಗಿದೆ. ಇದರಿಂದ ಪ್ರವಾಸೋದ್ಯಮ ಹಾಗೂ ಅಭಿವೃದ್ಧಿ ಕಾರ್ಯಗಳಿಗೂ ಅನುಕೂಲವಾಗಲಿದೆ ಎಂದರು. ಹೀಗಾಗಿ ರಾಜ್ಯಪಾಲರ ಭಾಷಣಕ್ಕೆ ಮೆಚ್ಚುಗೆ ಸೂಚಿಸಿ ಅನುಮೋದಿಸುವುದಾಗಿ ಹೇಳಿದರು.

ವಾಗ್ವಾದ :
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ತೆರಿಗೆ ಪಾಲಿನಲ್ಲಿ ತಾರತಮ್ಯ ಮಾಡುತ್ತಿದೆ ಹಾಗೂ ಹಿಂದಿ ಹೇರಿಕೆ ಹೆಚ್ಚು ಮಾಡುತ್ತಿದೆ ಎಂದು ನಯನಾ ಮೋಟಮ್ಮ ಮಾಡಿದ ಆರೋಪಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಏರಿದ ದನಿಯಲ್ಲಿ ಮಾತನಾಡಲು ಮುಂದಾದರು.
ಆಗ ಪ್ರತಿಯಾಗಿ ನಯನಾ ಮೋಟಮ್ಮ ಅವರು ಕೂಡ ಮಾತನಾಡಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು ಗೊಂದಲದ ವಾತಾವರಣ ಉಂಟಾಯಿತು.

RELATED ARTICLES

Latest News