ಬೆಂಗಳೂರು,ಮಾ.5- ನಮ್ಮ ಹೊಲ, ನಮ್ಮ ರಸ್ತೆ ಯೋಜನೆ ಮುಕ್ತಾಯವಾಗಿದ್ದು, ಅದಕ್ಕೆ ಪರ್ಯಾಯವಾಗಿ ಹೊಸ ಯೋಜನೆಯನ್ನು ಜಾರಿಗೊಳಿಸಲು ಮುಂಬರುವ ವರ್ಷದ ಬಜೆಟ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ನವಲಗುಂದ ಕ್ಷೇತ್ರದ ಶಾಸಕ ಎನ್.ಎಚ್.ಕೋನರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 5 ಸಾವಿರ ಕೋಟಿ ರೂ. ಗಳ ವೆಚ್ಚದಲ್ಲಿ ಪ್ರಗತಿ ಪಥ ಯೋಜನೆ ರೂಪಿಸಲಾಗಿದ್ದು, ಪ್ರತಿಯೊಂದು ಶಾಸಕರ ಕ್ಷೇತ್ರಕ್ಕೂ 15 ಕಿ.ಮೀ. ಕಾಮಗಾರಿ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಮಾನದಂಡಗಳು ಕಠಿಣವಾಗಿದ್ದು, ಅದನ್ನು ಸಡಿಲಗೊಳಿಸುವಂತೆ ತಾವು ಪತ್ರ ಬರೆದಿದ್ದು, ಅದನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದೆ. ಮತ್ತೊಮೆ ಪತ್ರ ಬರೆದು ಗ್ರಾಮ ಸಡಕ್ ಯೋಜನೆಯಡಿ ರಸ್ತೆಗಳನ್ನು ಆಯ್ಕೆ ಮಾಡಿಕೊಳ್ಳಲು ಜನಸಂಖ್ಯೆ ಮಿತಿಯನ್ನು ಸಡಿಲಗೊಳಿಸುವಂತೆ ಮನವಿ ಮಾಡಲಾಗುವುದು. ಗ್ರಾಮ ಸಡಕ್ ಯೋಜನೆ ಕಠಿಣವಾಗಿರುವ ಕಾರಣಕ್ಕಾಗಿಯೇ ರಾಜ್ಯಸರ್ಕಾರ ಪ್ರಗತಿ ಪಥ ಯೋಜನೆ ರೂಪಿಸಿದೆ. ನಮ ಹೊಲ, ನಮ ರಸ್ತೆ ಮಾದರಿಯ ಹೊಸ ಯೋಜನೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಕಿತ್ತೂರು ಕ್ಷೇತ್ರದ ಶಾಸಕ ಬಾಬಾ ಸಾಹೇಬ್ ಪಾಟೀಲ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೊಸ ತಾಲ್ಲೂಕುಗಳಿಗೆ ಬೇರೆ ಬೇರೆ ಇಲಾಖೆಗಳ ನೂತನ ಕಚೇರಿಗಳನ್ನು ತೆರೆಯಬಾರದು ಎಂದು ಹಿಂದಿನ ಸರ್ಕಾರ ಆದೇಶ ನೀಡಿತ್ತು. ನಮ ಸರ್ಕಾರ ಅವಶ್ಯಕತೆಗಳ ಆಧಾರದ ಮೇಲೆ ಪಟ್ಟಿ ಪಡೆದು ಗ್ರಾಮೀಣ ಜನತೆಗೆ ಕುಡಿಯುವ ನೀರು, ನೈರ್ಮಲ್ಯ ಉಪವಿಭಾಗ ಸೇರಿದಂತೆ ವಿವಿಧ ಹೊಸ ಕಚೇರಿಗಳನ್ನು ಆರಂಭಿಸಲು ಕ್ರಮ ಕೈಗೊಳ್ಳುತ್ತಿದೆ ಎಂದರು.