ಬೆಂಗಳೂರು,ಮಾ.5- ಬಾಕಿ ಇರುವ ಗುತ್ತಿಗೆದಾರರ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿ ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ವಿಧಾನ ಪರಿಷತ್ ನಲ್ಲಿ ಹೇಳಿದ್ದಾರೆ.
ಜೆಡಿಎಸ್‌ನ ಟಿ.ಎ ಶರವಣ ಪ್ರಶ್ನೆಗೆ ಉತ್ತರಿಸಿದ ಸಚಿವ ಸತೀಶ್ ಜಾರಕಿಹೊಳಿ,
ಗುತ್ತಿಗೆದಾರರಿಗೆ ಒಟ್ಟು 9 ಸಾವಿರ ಕೋಟಿ ಹಣ ಬಾಕಿ ಕೊಡಬೇಕು. ಗುತ್ತಿಗೆದಾರರು ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದಾರೆ.
ಏಕಕಾಲದಲ್ಲಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಬಾಕಿ ಮೊತ್ತವನ್ನು ಬಿಡುಗಡೆ ಮಾಡುತ್ತೇವೆ ಎಂದು ಆಭಯ ನೀಡಿದರು.ಈಗಾಗಲೇ ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆಗೂ ಸಭೆ ನಡೆಸಿದ್ದೇವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಮೊತ್ತದ ಬಾಕಿ ಇರುವ ಸಮಸ್ಯೆ ಎದುರಾಗಿದೆ. ಆದರೂ ನಮ ಸರ್ಕಾರ ಆದ್ಯತೆ ಮೇರೆಗೆ ಬಾಕಿ ಮೊತ್ತವನ್ನು ಬಡುಗಡೆ ಮಾಡಲಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಸದಸ್ಯ ಶರವಣ ಅವರು, ಗುತ್ತಿಗೆದಾರರಿಗೆ ನಿಗಧಿತ ಸಮಯಕ್ಕೆ ಸರಿಯಾಗಿ ಹಣ ಬಡುಗಡೆ ಮಾಡದ ಕಾರಣ, ಗುತ್ತಿಗೆದಾರರು ಆತಹತ್ಯೆ, ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಜೊತೆಗೆ ವಿಷ ಕುಡಿಯುತ್ತೇವೆ ಎಂದು ಹೇಳಿದ್ದಾರೆ. ಸರ್ಕಾರಕ್ಕೂ ಮಾನವೀಯತೆ ಇದ್ದರೆ ಮೊದಲು ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.