Thursday, March 6, 2025
Homeರಾಜ್ಯಸರ್ಕಾರಿ ಕಾಮಗಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಕುರಿತು ಬಿಜೆಪಿ ಆಕ್ರೋಶ

ಸರ್ಕಾರಿ ಕಾಮಗಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಕುರಿತು ಬಿಜೆಪಿ ಆಕ್ರೋಶ

BJP outraged over reservation for Muslims in government work contracts

ಬೆಂಗಳೂರು,ಮಾ.5- ಧರ್ಮದ ಹೆಸರಿನಲ್ಲಿ ಸಮಾಜ ಹಾಗೂ ನಾಡನ್ನು ವಿಭಜನೆ ಮಾಡಲು ಹೊರಟಿರುವ ಕಾಂಗ್ರೆಸ್‌‍ ಸರ್ಕಾರದ ಧೋರಣೆಯನ್ನು ಬಿಜೆಪಿ ಬಲವಾಗಿ ಖಂಡಿಸಿ ವಿರೋಧಿಸುತ್ತದೆ. ಸರ್ಕಾರ ಸದ್ಯ ಕಾಮಗಾರಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಹೊರಟಿರುವ ತುಷ್ಟೀಕರಣದ ಧೋರಣೆಯ ನಿರ್ಧಾರವನ್ನು ಕೈಬಿಡಬೇಕು ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿ ಸಿದ್ದಾರೆ.

ಈ ಕುರಿತು ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ವಿಜಯೇಂದ್ರ ಅವರು, ಕಸುಬು ಆಧಾರಿತ ಅತಿ ಹಿಂದುಳಿದ ಕಾಯಕ ಸಮುದಾಯಗಳು ಆಧುನಿಕ ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ಬದುಕಿನ ಅಸ್ತಿತ್ವ ಕಂಡುಕೊಳ್ಳಲು ಪ್ರಯಾಸ ಪಡುತ್ತಿದ್ದಾರೆ.

ಇಂತಹ ಅತಿ ಹಿಂದುಳಿದ ಸಮುದಾಯಗಳಿಗೆ ಯಾವ ಕಾರ್ಯಕ್ರಮ, ಯೋಜನೆಗಳನ್ನು ಹಾಗೂ ವಿಶೇಷ ಮೀಸಲಾತಿಯನ್ನು ಕಲ್ಪಿಸಿಕೊಡದ ಕಾಂಗ್ರೆಸ್‌‍ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದವರ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ವಾಗ್ದಳಿ ನಡೆಸಿದ್ದಾರೆ.

ಕಾಂಗ್ರೆಸ್‌‍ ಸರ್ಕಾರದ ಕಣ್ಣಿಗೆ ಅಲ್ಪಸಂಖ್ಯಾತರು ಎಂದರೆ ಮುಸ್ಲಿಮರು ಮಾತ್ರ ಕಾಣುತ್ತಾರೆ ಹೊರತು ಇತರ ನೈಜ ಅಲ್ಪಸಂಖ್ಯಾತ ಸಮುದಾಯಗಳಾವೂ ಕಾಣುವುದೇ ಇಲ್ಲ, ದಶಕಗಳ ಹಿಂದೆ ಅಲ್ಪಸಂಖ್ಯಾತರಾಗಿದ್ದ ಮುಸ್ಲಿಮರು ಇಂದು ಸಂಘಟಿತವಾಗಿ ಮುಂಚೂಣಿಯಲ್ಲಿದ್ದಾರೆ, ಕಾಂಗ್ರೆಸ್‌‍ ಪಕ್ಷಕ್ಕೆ ಬಹುಸಂಖ್ಯಾತ ಮತ ಬ್ಯಾಂಕ್‌ ಆಗಿದ್ದಾರೆ, ಈ ಕಾರಣಕ್ಕಾಗಿ ಮುಸ್ಲಿಮರಿಗೆ ಮಾತ್ರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಧರ್ಮದ ಹೆಸರಿನಲ್ಲಿ ಉದ್ಯೋಗ ಹಾಗೂ ಶೈಕ್ಷಣಿಕ ಮೀಸಲಾತಿ ನೀಡಲಾಗಿದೆ, ಇದೀಗ ಸರ್ಕಾರಿ ಕಾಮಗಾರಿಗಳಲ್ಲೂ ಶೇ. 4 ರಷ್ಟು ಮೀಸಲಾತಿ ಕಲ್ಪಿಸಲು ಮುಂದಾಗಿ ನಿಯಮ ರೂಪಿಸಲು ಹೊರಟಿರುವುದು ಮುಸ್ಲಿಂ ಓಲೈಕೆಯ ಪರಮಾವಧಿಯಾಗಿದೆ ಎಂದು ಕಿಡಿಕಾರಿದ್ದಾರೆ.

ಮುಸ್ಲಿಮರೂ ಸೇರಿದಂತೆ ಸಮಗ್ರ ಅಲ್ಪಸಂಖ್ಯಾತ ಸಮುದಾಯಗಳ ಕುರಿತು ಯಾವುದೇ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡರೆ ನಾವು ಅದನ್ನು ಆಕ್ಷೇಪಿಸುವುದಿಲ್ಲ. ಆದರೆ ಕೇವಲ ಮುಸ್ಲಿಮರನ್ನು ಮಾತ್ರ ಪ್ರತ್ಯೇಕಿಸಿ ಓಲೈಸುವುದು ಸಮಾಜ ಕಟ್ಟುವುದಕ್ಕೋ ಅಥವಾ ಸಮಾಜ ಒಡೆಯುವುದಕ್ಕೋ ಎಂಬ ಪ್ರಶ್ನೆ ಜನರು ಕೇಳುತ್ತಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಬಾಯಲ್ಲಿ ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟದ ಮಂತ್ರ, ಸಂಪನೂಲದ ಪಾಲಿನಲ್ಲಿ ನಿರಂತರ ಪಕ್ಷಪಾತ. ಇದು ಕಾಂಗ್ರೆಸ್‌‍ ಅನುಸರಿಸಿಕೊಂಡು ಬಂದಿರುವ ಇಬ್ಬಂದಿ ನೀತಿ, ಸರ್ಕಾರದ ಯೋಜನೆಗಳು ಕಾರ್ಯಗತಗೊಳ್ಳಲು ಪಾರದರ್ಶಕ ನಿಯಮದ ಅಡಿಯಲ್ಲಿ ಕಾಮಗಾರಿಗಳ ನಿರ್ವಹಣೆಯಾಗಬೇಕು.

ಈ ನಿಟ್ಟಿನಲ್ಲಿ ಶೋಷಿತ ಸಮುದಾಯಗಳಿಗೆ ಅವಕಾಶ ಕಲ್ಪಿಸಲು ಮೀಸಲಾತಿ ನೀಡುವುದು ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ಮೂಲ ಆಶಯಕ್ಕೆ ಪೂರಕವಾಗಿದೆ. ಆದರೆ ಧರ್ಮಾಧಾರಿತ ಮೀಸಲಾತಿ ಕಲ್ಪಿಸುವುದು ಪಾರದರ್ಶಕ ನಿಯಮದ ಅರ್ಥವನ್ನೇ ಕಳೆದುಕೊಳ್ಳುತ್ತದೆ ಎಂದು ವಿಜಯೇಂದ್ರ ಸರ್ಕಾರದ ಮೇಲೆ ಟೀಕಾ ಪ್ರಹಾರ ನಡೆಸಿದ್ದಾರೆ.

RELATED ARTICLES

Latest News