ಹಾಸನ,6 : ಸಾಲಕ್ಕೆ ಶೂರಿಟಿ ಸಹಿ ಹಾಕುವಂತೆ ಬೆದರಿಕೆ ಹಾಗೂ ಕಿರುಕುಳ ಹಿನ್ನೆಲೆಯಲ್ಲಿ ಮನನೊಂದ ಮಹಿಳೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿಕ್ಕೋಡು ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದ ಜಮುನಾ(44) ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಬಿಕ್ಕೋಡು ಗ್ರಾಮದ ಸಂದೀಪ್ ಧನುಶ್ರೀ ದಂಪತಿ ವಿರುದ್ದ ಕಿರುಕುಳ ಆರೋಪ ಕೇಳಿ ಬಂದಿದ್ದು 10 ಲಕ್ಷ ಸಾಲಕ್ಕೆ ಶೂರಿಟಿ ಹಾಕುವಂತೆ ಒತ್ತಾಯಿಸಿದ್ದರು.
ಶೂರಿಟಿ ನೀಡದಿದ್ದರೆ ಮಗನನ್ನು ಸಾಯಿಸುವುದಾಗಿ ದಂಪತಿ ಬೆದರಿಕೆ ಹಾಕಿದ್ದರು. ನನ್ನ ಮನೆ ಹಾಳು ಮಾಡುವ ಆಸೆ ಇಟ್ಟುಕೊಂಡಿದ್ದಾರೆ. ನಾನು ಸಾಯುತ್ತಿದ್ದೇನೆ. ನನ್ನ ಸಾವಿಗೆ ಸಂದೀಪ್, ಧನುಶ್ರೀ ಕಾರಣ ಎಂದು ಬರೆದಿಟ್ಟು ಜಮುನಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದೀಗ ಸಂದೀಪ್, ಧನುಶ್ರೀ ವಿರುದ್ದ ಯಮುನಾ ಪುತ್ರ ಸಾತ್ವಿಕ್ ಆರೇಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.