Friday, November 28, 2025
Homeಬೆಂಗಳೂರುನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರಿಗೆ ಬಿಗ್ ಶಾಕ್ ನೀಡಿದ ಜಿಬಿಎ..!

ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರಿಗೆ ಬಿಗ್ ಶಾಕ್ ನೀಡಿದ ಜಿಬಿಎ..!

GBA gives big shock to those who build buildings in violation of rules

ಬೆಂಗಳೂರು, ನ.27– ನಗರದಲ್ಲಿ ಇನ್ನು ಮುಂದೆ ಅಕ್ರಮ ಕಟ್ಟಡ ನಿರ್ಮಿಸುವವರಿಗೆ ಉಳಿಗಾಲವಿಲ್ಲ. ಒಂದು ವೇಳೆ ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದರೆ 130 ದಿನಗಳ ಒಳಗೆ ಡೆಮಾಲಿಷನ್‌ ಆಗಲಿದೆ. ಇರಲಿ ಎಚ್ಚರ. ನಗರದೆಲ್ಲೆಡೆ ನಾಯಿ ಕೊಡೆಗಳಂತೆ ಅಕ್ರಮ ಕಟ್ಟಡ ನಿರ್ಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕಠಿಣ ನಿರ್ಧಾರ ಕೈಗೊಳ್ಳಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ.
ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಜಿಬಿಎ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಉಲ್ಲಂಘನೆ ತಡೆಗೆ ಹೊಸ ಮಾರ್ಗಸೂಚಿ ರಚಿಸಲಾಗಿದೆ.

ಕಟ್ಟಡ ನಿರ್ಮಿಸುವ ನಕ್ಷೆ ಯಾವ ರೀತಿ ಇರಬೇಕೆಂದೂ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಅನುಮತಿ ಪಡೆದಷ್ಟೇ ಕಟ್ಟಡ ನಿರ್ಮಾಣ ಮಾಡಬೇಕು,.ಇಲ್ಲದಿದ್ದರೆ ಭಾರಿ ದಂಡ ಕಟ್ಟಬೇಕಾಗುತ್ತದೆ.ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಮೊದಲು ಬೆಂಗಳೂರು ಕೇಂದ್ರ ಪಾಲಿಕೆಯಲ್ಲಿ ಈ ಯೋಜನೆಯನ್ನು ಮೊದಲು ಅನುಷ್ಠಾನಗೊಳಿಸಲಾಗುತ್ತಿದೆ.

ಈಗಾಗಲೇ ಬೆಂಗಳೂರು ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್‌ ಅವರು ಈ ಆದೇಶ ಹೊರಡಿಸಿದ್ದು, ಮಾರ್ಗಸೂಚಿ ಪ್ರಕಾರ ಕಟ್ಟಡ ನಿರ್ಮಿಸದಿದ್ದರೆ, ನೊಟೀಸ್‌‍ ನೀಡಬೇಕು..ಅನುಮತಿ ಪಡೆಯದೇ ಕಟ್ಟಡ ನಿರ್ಮಿಸಿದ್ದರೆ ಅಂತಹ ಕಟ್ಟಡ ಡೆಮಾಲಿಷನ್‌ ಆಗುವುದು ನಿಶ್ಚಿತ. ಅಕ್ರಮ ಕಟ್ಟಡ ನಿರ್ಮಿಸಿದ್ದರೂ ಅಧಿಕಾರಿಗಳು ತಕ್ಷಣದಲ್ಲಿ ಕ್ರಮ ಕೈಗೊಳ್ಳದಿದ್ದರೆ ಅವರ ತಲೆದಂಡವೂ ಆಗಲಿದೆ. ಅಕ್ರಮ ಕಟ್ಟಡ ಅಂತ ದೂರು ಬಂದು 130 ದಿನದೊಳಗೆ ಡೆಮಾಲಿಷನ್‌ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟ ಸೂಚನೆ ನೀಡಲಾಗಿದೆ.

ಮಾರ್ಗಸೂಚಿಯಲ್ಲಿ ಏನಿದೆ ಅಂತ ನೋಡುವುದಾದರೆ; 15 ಮೀಟರ್‌ ಎತ್ತರದ ಕಟ್ಟಡಗಳಿಗೆ ಈ ಮಾರ್ಗಸೂಚಿ ಅನ್ವಯ. ನಕ್ಷೆ ಅನುಮತಿ ಪಡೆದು 15 ದಿನದೊಳಗೆ ತಳಪಾಯದ ಗಡಿರೇಖೆ ಗುರುತು ಮಾಡಬೇಕು. ಅಧಿಕಾರಿಗಳ ಮುಂದೆ ತಳಪಾಯ ಗುರುತು ಮಾಡಬೇಕು. ತಳಪಾಯದ ಗುರುತಿನ ಬಳಿಕ ತಳಪಾಯದ ಪ್ರಮಾಣಪತ್ರ ನೀಡಬೇಕು. ವಲಯ ಮಟ್ಟದ ಉಪ ನಿರ್ದೇಶಕರು ತಳಪಾಯ ಪ್ರಮಾಣಪತ್ರ ದೃಢೀಕರಿಸಿಕೊಳ್ಳಬೇಕು.

15 ಮೀಟರ್‌ ಗಿಂತ ಎತ್ತರತದ ಕಟ್ಟಡಗಳಿಗೆ ಜಂಟಿ ನಿರ್ದೇಶಕರಿಗೆ ಜವಾಬ್ದಾರಿ ನೀಡಲಾಗಿದೆ. ನಕ್ಷೆ ಮಂಜೂರಾದ ದಾಖಲೆಗಳನ್ನ ಅಂತರ್ಜಾಲದಲ್ಲಿ ಪ್ರಕಟಿಸಬೇಕು. ನಗರ ಯೋಜನೆಯಲ್ಲಿರೋ ಸಿಬ್ಬಂದಿ ಕಾಲಕಾಲಕ್ಕೆ ತಪಾಸಣೆ ಮಾಡಬೇಕು. ವರ್ಷಕ್ಕೆ ಆರು ಬಾರಿ ತಪಾಸಣೆ ಕಡ್ಡಾಯ.

ಜನವರಿ, ಮಾರ್ಚ್‌, ಮೇ, ಜುಲೈ, ಸೆಪ್ಟೆಂಬರ್‌, ನವೆಂಬರ್‌ನಲ್ಲಿ ತಪಾಸಣೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ನಕ್ಷೆ ಪಡೆದ ಮೇಲೆ ಉಲ್ಲಂಘನೆ ಕಂಡು ಬಂದರೆ ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು.ಹಿರಿಯ ಅಧಿಕಾರಿಗಳು ನಿಯಮದ ಪ್ರಕಾರ ಕ್ರಮ ಕೈಗೊಳ್ಳಬೇಕು. ನಕ್ಷೆ ಪಡೆಯದೆ ನಿರ್ಮಿಸಿರೋ ಕಟ್ಟಡ ತಕ್ಷಣ ತೆರವು ಮಾಡಬೇಕು.

RELATED ARTICLES

Latest News