ಬೆಂಗಳೂರು,ಮಾ.7– ರಾಜ್ಯದ 20 ಜಿಐ ಟ್ಯಾಗ್ ಹೊಂದಿರುವ ಬೆಳೆಗಳು ಹಾಗೂ ಇತರ ದೇಸಿ ತಳಿಗಳು ಕಣ್ಮರೆಯಾಗಿ ನಶಿಸಿಹೋಗುವುದನ್ನು ತಪ್ಪಿಸಲು ದೇಸಿ ತಳಿಗಳ ಬೀಜ ಬ್ಯಾಂಕ್ ಸ್ಟಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಸಿಎಂ, ಮಲೆನಾಡು ಜಿಲ್ಲೆಗಳಲ್ಲಿ ಎಲೆಚುಕ್ಕಿ ರೋಗಬಾಧೆಗೆ ತುತ್ತಾಗಿ 2 ಲಕ್ಷಕ್ಕಿಂತ ಅಧಿಕ ಅಡಿಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಈ ರೋಗ ನಿಯಂತ್ರಿಸಲು ಸಸ್ಯ ಸಂರಕ್ಷಣಾ ಕ್ರಮಗಳಿಗಾಗಿ 62 ಕೋಟಿ ರೂ. ಒದಗಿಸಲಾಗುವುದು ಎಂದರು.
ತೆಂಗು ಬೆಳೆಯನ್ನು ವ್ಯಾಪಕವಾಗಿ ಕಾಡುತ್ತಿರುವ ಕಪ್ಪುತಲೆ ಹುಳುವಿನ ಬಾಧೆಯಿಂದ ರಕ್ಷಿಸಲು ವೈಜ್ಞಾನಿಕ ಸಮೀಕ್ಷೆ ನಡೆಸಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ತೋಟಗಾರಿಕಾ ಬೆಳೆಗಳ ಹನಿ ನೀರಾವರಿ ಕಾರ್ಯಕ್ರಮದಡಿ 52 ಸಾವಿರ ಫಲಾನುಭವಿಗಳಿಗೆ 426 ಕೋಟಿ ರೂ. ಸಹಾಯಧನ ಒದಗಿಸಲಾಗುವುದು. ಗದಗ ಜಿಲ್ಲೆಯ ಡಂಬಳದಲ್ಲಿ ತೋಟಗಾರಿಕಾ ಕಾಲೇಜು ಪ್ರಾರಂಭಿಸಲು ತಜ್ಞರಿಂದ ಕಾರ್ಯಸಾಧ್ಯತಾ ವರದಿ ಪಡೆದುಕೊಳ್ಳಲಾಗುವುದು ಎಂದರು.
ಬ್ಯಾಡಗಿ ಮೆಣಸಿನಕಾಯಿ ತಳಿಯ ಸಂರಕ್ಷಣೆ ಮತ್ತು ಎಲೆರೋಗ ತ್ರಿಬ್ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಶೋಧನೆ ಕೈಗೊಳ್ಳಲಾಗುವುದು. ತೋಟಗಾರಿಕಾ ಬೆಳೆಗಳ ವಿಸ್ತೀರ್ಣ, ಉತ್ಪಾದನೆ, ಬೆಳೆಗಳ ಆರೋಗ್ಯ, ಮಾರುಕಟ್ಟೆ ಇತ್ಯಾದಿಗಳ ಬಗ್ಗೆ ನೈಜ ಸಮಯದ ಆಧಾರದ ಮೇಲೆ ರೈತರಿಗೆ ಮಾಹಿತಿ ಒದಗಿಸಲು ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಟೆಕ್ನಾಲಜಿ ಮತ್ತು ಖಾಸಗಿ ಸಹಯೋಗದಲ್ಲಿ ಜ್ಞಾನಕೋಶ ಸ್ಥಾಪಿಸಲಾಗುವುದು ಎಂದು ತಿಳಿಸಿದರು. ತೋಟಗಾರಿಕಾ ಯೋಜನೆ-2 ಜಾರಿಗೊಳಿಸಲಿದ್ದು, ಪ್ರಸಕ್ತ ಸಾಲಿನಲ್ಲಿ 95 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದರು.