Sunday, March 9, 2025
Homeರಾಜ್ಯ'ಬ್ರಾಂಡ್' ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಸಾವಿರಾರು ಕೋಟಿ ಮೀಸಲು

‘ಬ್ರಾಂಡ್’ ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಸಾವಿರಾರು ಕೋಟಿ ಮೀಸಲು

thousands of crores for comprehensive development of 'Brand' Bengaluru

ಬೆಂಗಳೂರು, ಮಾ.7- ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಬಿಬಿಎಂಪಿಯನ್ನು ಬ್ರಾಂಡ್ ಬೆಂಗಳೂರನ್ನಾಗಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಮಹತ್ವದ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

ನಗರದ ವಾಹನ ದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ 40 ಸಾವಿರ ಕೋಟಿ ರೂ. ವೆಚ್ಚದಲ್ಲಿ ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಸುರಂಗ ಮಾರ್ಗ ಕಾರಿಡಾರ್ ಯೋಜನೆ ಕೈಗೆತ್ತಿಕೊಳ್ಳಲು 19 ಸಾವಿರ ಕೋಟಿ ರೂ.ಗಳ ಗ್ಯಾರಂಟಿಯನ್ನು ಸರ್ಕಾರದಿಂದ ಒದಗಿಸಲಾಗಿದೆ ಎಂದು ಅವರು ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ಅದೇ ರೀತಿ ನಮ್ಮ ಮೆಟ್ರೋ ಹಂತ-3 ರ ಯೋಜನೆಯೊಂದಿಗೆ 8916 ಕೋಟಿ ರೂ. ವೆಚ್ಚದಲ್ಲಿ 40.40 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಲೇತುವೆ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ. ಕಾಲುವೆಗಳ ಬಫರ್ ನ್ ಪ್ರದೇಶವನ್ನು ಬಳಸಿಕೊಂಡು 3 ಸಾವಿರ ಕೋಟಿ ರೂ. ವೆಚ್ಚದಲ್ಲಿ 300ಕಿ.ಮೀ ಹೆಚ್ಚುವರಿ ರಸ್ತೆ ಜಾಲ ಅಭಿವೃದ್ಧಿಪಡಿಸಲಾಗುತ್ತಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 460 ಕಿ.ಮೀ ಉದ್ದದ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳನ್ನು 660 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇದರೊಂದಿಗೆ ನಗರದಲ್ಲಿ 120 ಕಿ.ಮೀ ಉದ್ದದ ಮೇಲ್ಲೇತುವೆಗಳು ಮತ್ತು ಗ್ರೇಡ್ ಸೆಪರೆಟರ್‌ಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಂಡ್ ಬೆಂಗಳೂರು ಯೋಜನೆಯಡಿ 2.24-25ನೇ ಸಾಲಿನಲ್ಲಿ 1800 ಕೋಟಿ ರೂ. ವೆಚ್ಚದ ಮಹತ್ವದ 21 ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಬೆಂಗಳೂರನ್ನು ಅಂತಾರಾಷ್ಟ್ರೀಯ ಆರೋಗ್ಯ ಮಾನದಂಡಗಳ ನಗರವನ್ನಾಗಿಸಲು ಮುಂದಿನ ಮೂರು ವರ್ಷಗಳಲ್ಲಿ 413 ಕೋಟಿ ರೂ.ಗಳಲ್ಲಿ ಸಮಗ್ರ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ನಗರದಲ್ಲಿ ಪದೇ ಪದೇ ಉಂಟಾಗುವ ಪ್ರವಾಹ ಪರಿಸ್ಥಿತಿಯನ್ನು ತಪ್ಪಿಸುವ ಉದ್ದೇಶದಿಂದ ಒಳಚರಂಡಿಗಳು ಹಾಗೂ ಎಸ್‌ ಟಿಪಿಗಳನ್ನು ನಿರ್ಮಿಸಲು ಬಿಬಿಎಂಪಿ ಹಾಗೂ ಜಲಮಂಡಳಿಗೆ 3000 ಕೋಟಿ ರೂ.ಗಳ ಆರ್ಥಿಕ ನೆರವು ನೀಡಲು ಉದ್ದೇಶಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ನಗರದ ಜನರಿಗೆ ಸಮರ್ಪಕ ಕುಡಿಯುವ ನೀರು ಒದಗಿಸಲು ಅನುಕೂಲವಾಗುವಂತೆ 5550 ಕೋಟಿ ರೂ. ವೆಚ್ಚದಲ್ಲಿ ನಗರಕ್ಕೆ 774 ಎಂಎಲ್‌ ಡಿ ನೀರು ನೀಡುವ ಕಾವೇರಿ 5ನೇ ಹಂತದ ಯೋಜನೆಯನ್ನು ಸಾರ್ವಜನಿಕರಿಗೆ ಲೋಕಾರ್ಪಣೆಗೊಳಿಸಲಾಗುತ್ತಿದೆ.

ನೆನೆಗುದಿಗೆ ಬಿದ್ದಿರುವ ಹೊರವರ್ತುಲ ರಸ್ತೆ ನಿರ್ಮಾಣ ಯೋಜನೆಯನ್ನು ಬೆಂಗಳೂರು ಬಿಸಿನೆಸ್ ಕಾರಿಡಾರ್ ಎಂದು ಮರುನಾಮಕರಣ ಮಾಡಿ ಹುಡೋ ಬ್ಯಾಂಕ್‌ನ 27 ಸಾವಿರ ಕೋಟಿ ರೂ.ಗಳ ನೆರವಿನೊಂದಿಗೆ 73 ಕಿ. ಮೀ ಉದ್ದದ ವರ್ತುಲ ರಸ್ತೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
ಪ್ರತಿನಿತ್ಯ 8.5 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿರುವ ಮೆಟ್ರೋ ಜಾಲವನ್ನು ಮುಂದಿನ ಎರಡು ವರ್ಷಗಳಲ್ಲಿ 98.60 ಕಿ.ಮೀ ಉದ್ದದ ಹೆಚ್ಚುವರಿ ಮಾರ್ಗಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದ್ದು, ಮೆಟ್ರೋ ಜಾಲವನ್ನು ದೇವನಹಳ್ಳಿವರೆಗೂ ವಿಸ್ತರಿಸುವ ದೃಢ ನಿರ್ಧಾರ ಮಾಡಲಾಗಿದೆ.

ಹಸಿರು ಬೆಂಗಳೂರು ಯೋಜನೆ ಅಡಿಯಲ್ಲಿ 35 ಕೋಟಿ ರೂ.ವೆಚ್ಚದಲ್ಲಿ 14 ಕೆರೆಗಳ ಅಭಿವೃದ್ದಿ ಕಾಮಗಾರಿ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ 234 ಕೋಟಿ ರೂ. ವೆಚ್ಚದಲ್ಲಿ ಬಿಡಿಎ ವತಿಯಿಂದ ವರ್ತೂರು ಹಾಗೂ ಬೆಳ್ಳಂದೂರು ಕೆರೆಗಳ ಪುನರುಜ್ಜಿವನಗೊಳಿಸುವ ಗಟ್ಟಿ ತೀರ್ಮಾನ ಮಾಡಲಾಗಿದೆ.

ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರದಿಂದ ಪ್ರತಿ ವರ್ಷ ಬಿಬಿಎಂಪಿಗೆ ನೀಡಲಾಗುತ್ತಿದ್ದ 3000 ಕೋಟಿ ರೂ.ಗಳ ಅನುದಾನವನ್ನು ಪ್ರಸಕ್ತ ವರ್ಷದಲ್ಲಿ 7 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಿ ಬೃಹತ್ ಅಭಿವೃದ್ಧಿ ಕಾಮಗಾರಿಗಳನ್ನು ಆಧ್ಯತೆ ಮೇರೆಗೆ ಅನುಷ್ಠಾನಗೊಳಿಸುತ್ತಿರುವುದರ ಜತೆಗೆ ಹೊಸದಾಗಿ ವಿಶೇಷ ಉದ್ದೇಶಿತ ಸಂಸ್ಥೆ ಸ್ಥಾಪಿಸಲಾಗುತ್ತಿದೆ.

ತಂತ್ರಜ್ಞಾನ ಬಳಕೆ ಮಾಡಿ ಇ-ಖಾತಾ ವ್ಯವಸ್ಥೆ ಜಾರಿಗೆ ತಂದಿರುವುದರಿಂದ ನಗರದಲ್ಲಿ ಈವರೆಗೂ 4556 ಕೋಟಿ ರೂ.ಗಳ ತೆರಿಗೆ ಸಂಗ್ರಹ ಮಾಡಲಾಗಿದ್ದು, ಇದರೊಂದಿಗೆ ಹೊಸ ಜಾಹೀರಾತು ಜಾರಿಯಿಂದ 750 ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

RELATED ARTICLES

Latest News