ಬೆಂಗಳೂರು, ಮಾ.7– ರಾಜ್ಯದಲ್ಲಿ ಪ್ರಸ್ತುತ ಐದು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸಕ್ತ ವರ್ಷ ಬಳ್ಳಾರಿ, ದಾವಣಗೆರೆ, ಮೈಸೂರು ಮತ್ತು ಬೆಂಗಳೂರು ಕೇಂದ್ರ ವಲಯಗಳಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳನ್ನು ಸ್ಥಾಪಿಸಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸಭೆಯಲ್ಲಿ 2025 -26ನೇ ಸಾಲಿನ ಬಜೆಟ್ ಮಂಡಿಸಿದ ಅವರು, ಪೊಲೀಸ್ ಸಿಬ್ಬಂದಿಯು ಸದೃಢ ಮತ್ತು ಆರೋಗ್ಯವಾಗಿರಬೇಕಾದುದು ಅವಶ್ಯವಾಗಿದ್ದು, ಪೊಲೀಸ್ ಸಿಬ್ಬಂದಿಗಳ ವಾರ್ಷಿಕ ಆರೋಗ್ಯ ತಪಾಸಣೆಗಾಗಿ ಪ್ರಸಕ್ತ ನೀಡಲಾಗುತ್ತಿರುವ ಮೊತ್ತವನ್ನು ತಲಾ 1 ಸಾವಿರದಿಂದ 1500 ರೂ.ಗಳಿಗೆ ಹೆಚ್ಚಿಸಲಾಗುವುದೆಂದು ಹೇಳಿದರು.
ಬಂದೋಬಸ್ತಗೆ ನಿಯೋಜಿಸುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಆಹಾರ ಭತ್ಯೆಯ ದರವನ್ನು 200ರೂ. ರಿಂದ 300 ರೂ.ಗೆ ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದರು.
ಗೃಹ ರಕ್ಷಕ ಮತ್ತು ಪೌರ ರಕ್ಷಣ ಸ್ವಯಂ ಸೇವಕರು ಕರ್ತವ್ಯಕ್ಕೆ ಹಾಗೂ ತರಬೇತಿಗೆ ನಿಯೋಜಿಸಿದ ಸಂದರ್ಭದಲ್ಲಿ ಮರಣಹೊಂದಿದಲ್ಲಿ ಅವರ ಕುಟುಂಬಕ್ಕೆ ಹಾಲಿ ನೀಡಲಾಗುತ್ತಿರುವ 5ಲಕ್ಷ ರೂ. ಪರಿಹಾರ ಧನವನ್ನು 10 ಕಲ್ಪ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು. 100 ಕೋಟಿ ರೂ. ಅನುದಾನ: ಕಾರಗೃಹ ಇಲಾಖೆ ಅಡಿಯಲ್ಲಿನ ಮೂಲ ಸೌಕರ್ಯದ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದರು.