ಬೆಂಗಳೂರು, ಮಾ.7- ಪ್ರವಾಸಿಗರಿಗೆ ಶುಚಿ-ರುಚಿಯಾದ ಪೌಷ್ಠಿಕ ಮೀನಿನ ಖಾದ್ಯ ಒದಗಿಸಲು ಮೈಸೂರಿನಲ್ಲಿ ಅತ್ಯಾಧುನಿಕ ಮತ್ರ್ಯ ದರ್ಶಿನಿಯನ್ನು ಪ್ರಾರಂಭಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
2025-26ನೆ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು, ರಾಜ್ಯದ ಮತ್ತ್ವ ಸಂಪತ್ತಿನ ಸಂರಕ್ಷಣೆಯೊಂದಿಗೆ ಸುಸ್ಥಿರ ಮೀನುಗಾರಿಕೆ ಹಾಗೂ ಮೀನುಗಾರರ ಆರ್ಥಿಕಾಭಿವೃದ್ಧಿಗೆ ಉತ್ತೇಜನ ನೀಡಲು ಮೀನುಗಾರಿಕಾ ನೀತಿ ರೂಪಿಸಲಾಗುವುದು ಎಂದರು.
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ವಾಹನದಟ್ಟಣೆ ನಿರ್ವಹಿಸಲು ಮಲ್ಟಿಲೆವೆಲ್ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲಾಗುವುದು. ಆಳ ಸಮುದ್ರದ ಮೀನುಗಾರಿಕೆ ಪ್ರೋತ್ಸಾಹಿಸಲು ಪ್ರಸಕ್ತ ಇರುವ ಮೀನುಗಾರಿಕಾ ದೋಣಿಗಳ ಉದ್ದದ ಮಿತಿಯನ್ನು ಸಡಿಲಿಸಲು ಕ್ರಮ ಕೈಗೊಳ್ಳಲಾಗುವುದು. ನೋಂದಣಿಯಾಗಿರುವ ಮೋಟರೀಕೃತ ದೋಣಿಗಳಲ್ಲಿ 15 ವರ್ಷ ಕಾಲಾವಧಿ ಮೀರಿರುವ ಹಳೆ ಎಂಜಿನ್ ಗಳನ್ನು ಬದಲಿಸಿ ಹೊಸ ಎಂಜಿನ್ ಖರೀದಿಸಲು ಶೇ.50ರಷ್ಟು, ಒಂದು ಲಕ್ಷ ಮಿತಿಗೊಳಪಟ್ಟು ಸಹಾಯಧನ ನೀಡಲಾಗುವುದು ಎಂದರು.