Sunday, March 9, 2025
Homeರಾಜ್ಯಪ್ರಸಕ್ತ ಹಣಕಾಸು ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗೆ 51,034 ಕೋಟಿ ಮೀಸಲು

ಪ್ರಸಕ್ತ ಹಣಕಾಸು ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗೆ 51,034 ಕೋಟಿ ಮೀಸಲು

51,034 crores reserved for guarantee schemes in the current financial year

ಬೆಂಗಳೂರು, ಮಾ.7– ಪ್ರಸಕ್ತ ಹಣಕಾಸು ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ 51,034 ಕೋಟಿ ರೂ. ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ತಿಳಿಸಿದ್ದಾರೆ. ಕಳೆದ ಎರಡು ಆಯವ್ಯಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದರ ಜೊತೆಗೆ ವಿತ್ತೀಯ ಕೊರತೆಯನ್ನು ಜಿಎಸ್‌ಡಿಪಿಯ ಶೇ.3ರ ಮಿತಿಯೊಳಗೆ ಮತ್ತು ಒಟ್ಟು ಹೊಣೆಗಾರಿಕೆಯನ್ನು ಜಿ.ಎಸ್.ಡಿ.ಪಿಯ ಶೇ.25ರ ಮಿತಿಯೊಳಗೆ ನಿಯಂತ್ರಿಸುವ ಮೂಲಕ ವಿತ್ತೀಯ ಶಿಸ್ತನ್ನು ಪಾಲಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಯೋಜನೆಯ ಮೂಲಕ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ರಸ್ತೆ, ಸಣ್ಣ ನೀರಾವರಿ ಹಾಗೂ ಮೂಲಸೌಕರ್ಯ ಒದಗಿಸಲು 8,000 ಕೋಟಿ ರೂ. ನೀಡಲಾಗುವುದು ಎಂದು ಮಾಹಿತ್ಯ ನೀಡಿದರು.

ಕರ್ನಾಟಕ ರಾಜ್ಯವು ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ರಾಜ್ಯಗಳಲ್ಲಿ ಒಂದಾಗಿದ್ದು, ದೇಶದ ಜಿ.ಡಿ.ಪಿಗೆ ಶೇ.8.4ರಷ್ಟು ಕೊಡುಗೆ ನೀಡಿದೆ. 2024-25ನೇ ಸಾಲಿನಲ್ಲಿ ರಾಜ್ಯ ಆರ್ಥಿಕತೆಯ ಬೆಳವಣಿಗೆಯು ಶೇ.7.4ರಷ್ಟು ದಾಖಲಾಗಿದ್ದು, ದೇಶದ ಆರ್ಥಿಕತೆಯು ಶೇ. 6.4ರಷ್ಟು ಬೆಳವಣಿಗೆಯಾಗಿದೆ. ರಾಜ್ಯವು ಆರ್ಥಿಕ ಅಭಿವೃದ್ಧಿಯ ಪಥದಲ್ಲಿ ಮುಂದುವರೆಯುತ್ತಿದ್ದು, ಪ್ರಸಕ್ತ ವರ್ಷದಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆಯು ದೇಶದ ಆರ್ಥಿಕತೆಗಿಂತ ಹೆಚ್ಚಾಗಿದೆ.

ಕಳೆದ ವರ್ಷದಲ್ಲಿ ಶೇ.-4.9ರಷ್ಟು ಬೆಳವಣಿಗೆ ದಾಖಲಾಗಿದ್ದ ಕೃಷಿ ವಲಯವು, 2024-25ರಲ್ಲಿ ಶೇ.4ರಷ್ಟು ಬೆಳವಣಿಗೆ ಸಾಧಿಸುವ ಮೂಲಕ ಚೇತರಿಕೆ ಕಂಡಿದ್ದು, ದೇಶದ ಕೃಷಿ ವಲಯದ ಬೆಳವಣಿಗೆ ಶೇ.3.8ಕ್ಕಿಂತ ಹೆಚ್ಚಾಗಿದೆ. ಮುಂಗಾರು ಬಿತ್ತನೆಗೆ ಸರ್ಕಾರದ ಸಕಾರಾತ್ಮಕ ಕ್ರಮಗಳೊಂದಿಗೆ ಉತ್ತಮ ಮುಂಗಾರು ಮತ್ತು ಜಲಾಶಯಗಳು ಭರ್ತಿಯಾಗಿದ್ದರಿಂದ 2024-25ನೇ ಸಾಲಿನಲ್ಲಿ ಕೃಷಿ ವಲಯದಲ್ಲಿ ಒಳ್ಳೆಯ ಬೆಳವಣಿಗೆ ಸಾಧಿಸಲು ಕಾರಣವಾಗಿದೆ.

ರಾಜ್ಯ ಸರ್ಕಾರವು ರೈತರ ಕಲ್ಯಾಣ ಉದ್ದೇಶಿತ ಯೋಜನೆಗಳಿಗೆ ಕಳೆದ ವರ್ಷ 44,000 ಕೋಟಿ ರೂ. ನೀಡಿತ್ತು. ಪ್ರಸಕ್ತ ವರ್ಷದಲ್ಲಿ ಒಟ್ಟು 51,339 ಕೋಟಿ ರೂ. ಅನುದಾನವನ್ನು ನೀಡಲಾಗಿದೆ ಎಂದು ತಿಳಿಸಿದರು.

ಕೈಗಾರಿಕಾ ವಲಯದಲ್ಲಿ ಹೂಡಿಕೆ ಸ್ನೇಹಿ ವಾತಾವರಣವನ್ನು ನಿರ್ಮಿಸುವಲ್ಲಿ ಕರ್ನಾಟಕವು ನೆಚ್ಚಿನ ರಾಜ್ಯವಾಗಿದೆ. ನಮ್ಮ ಸರ್ಕಾರವು ಹೆಚ್ಚಿನ ಉದ್ಯೋಗಗಳನ್ನು ಸೃಜಿಸುವುದರೊಂದಿಗೆ, ಕೈಗಾರಿಕಾ ಮತ್ತು ಉತ್ಪಾದನಾ ವಲಯದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ರಾಜ್ಯ ಸರ್ಕಾರವು ಕೈಗಾರಿಕಾ ನೀತಿ 2025-30ಕ್ಕೆ ಚಾಲನೆ ನೀಡಿದ್ದು, ಇದು 2030ರ ವೇಳೆಗೆ ಉತ್ಪಾದನಾ ವಲಯದಲ್ಲಿ ಶೇ.12ರಷ್ಟು ವಾರ್ಷಿಕ ಬೆಳವಣಿಗೆಯನ್ನು ಸಾಧಿಸುವುದರೊಂದಿಗೆ 20 ಲಕ್ಷ ಉದ್ಯೋಗಗಳನ್ನು ಸೃಜಿಸುವ ಗುರಿ ಹೊಂದಿದೆ ಎಂದರು.

2024-25ನೇ ಸಾಲಿನಲ್ಲಿ ಕೈಗಾರಿಕಾ ವಲಯವು ಶೇ.5.8ರಷ್ಟು ಬೆಳವಣಿಗೆ ಸಾಧಿಸಿದೆ. ರಾಜ್ಯಕ್ಕೆ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುವ ಉದ್ದೇಶದಿಂದ ಒಟ್ಟು 13,692 ಕೋಟಿ ರೂ. ಆರ್ಥಿಕ ನೆರವು ಮತ್ತು ಸಹಾಯಧನವನ್ನು ಒದಗಿಸಲು ಸರ್ಕಾರವು ಸಮ್ಮತಿಸಿದೆ ಎಂದು ತಿಳಿಸಿದರು.ಕರ್ನಾಟಕದ ಆರ್ಥಿಕತೆಯಲ್ಲಿ ಸೇವಾ ವಲಯದ ಕೊಡುಗೆಯೂ ಪ್ರಮುಖವಾಗಿದ್ದು, ಒಟ್ಟು ಮೌಲ್ಯವರ್ಧನೆಯಲ್ಲಿ ಸೇವಾ ವಲಯಗಳ ಪಾಲು ಶೇ.66ರಷ್ಟಿದೆ.

2024-25ನೇ ಸಾಲಿಗೆ ರಾಜ್ಯದಲ್ಲಿ ಸೇವಾ ವಲಯವು ಗಣನೀಯವಾಗಿ ಬೆಳವಣಿಗೆಯಾಗಿದ್ದು, ಶೇ.8.9ರಷ್ಟು ಬೆಳವಣಿಗೆ ದಾಖಲಿಸುವ ಮೂಲಕ ದೇಶದ ಆರ್ಥಿಕತೆಯಲ್ಲಿನ ಸೇವಾ ವಲಯದ ಬೆಳವಣಿಗೆ ಶೇ.7.2 ಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದರು..

ಶಕ್ತಿಗೆ 53 ಸಾವಿರ ಕೋಟಿ ರೂ. :
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಶಕ್ತಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 5,300 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಯೋಜನೆ ಜಾರಿ ಬಂದಾಗಿನಿಂದ ಈವರೆಗೆ 226.53 ಕೋಟಿ ಮಹಿಳಾ ಪ್ರಯಾಣಿಕರು ಸೌಲಭ್ಯ ಪಡೆದಿದ್ದಾರೆ. ಮಹಿಳೆಯರ ಸ್ವಾವಲಂಬನೆ ಮತ್ತು ಆರ್ಥಿಕ ಅಭಿವೃದ್ಧಿಗೆ ಶಕ್ತಿ ತುಂಬಿದ ಉಚಿತ ಪ್ರಯಾಣದ ಈ ಯೋಜನೆಗೆ 2024-25ನೇ ಸಾಲಿನಲ್ಲಿ 5,015 ಕೋಟಿ ರೂ.ಗಳ ವೆಚ್ಚ ಭರಿಸಲಾಗಿದೆ ಎಂದು ಹೇಳಿದ್ದಾರೆ.

RELATED ARTICLES

Latest News