ಬೆಂಗಳೂರು,ಮಾ.8– ವಿದೇಶದಿಂದ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಲುಕಿಬಿದ್ದಿರುವ ನಟಿ ರನ್ಯಾ ರಾವ್ ಅವರ ಜೊತೆ ಆತೀಯ ಸಂಪರ್ಕದಲ್ಲಿದ್ದ ಚಿತ್ರರಂಗದ ಹಲವಾರು ಮಂದಿ ಹಾಗೂ ನಾಡಿನ ಕೆಲವು ರಾಜಕಾರಣಿಗಳಿಗೆ ತಳಮಳ ಶುರುವಾಗಿದೆ.
ದುಬೈನಿಂದ 12 ಕೋಟಿ ರೂ.ಗೂ ಅಧಿಕ ಮೊತ್ತದ ಚಿನ್ನವನ್ನು ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸಿಲುಕಿಬಿದ್ದ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
14 ಕೆ.ಜಿ. ಚಿನ್ನವನ್ನು ದುಬೈನಿಂದ ಖರೀದಿಸಿ ತರುವ ಆಕೆಯ ಧೈರ್ಯದ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿರುವುದು ಸ್ಪಷ್ಟವಾಗಿದೆ. ಡಿಆರ್ಐ ಅಧಿಕಾರಿಗಳು ಪೊರೆನ್ಸಿಕ್ ಅಧಿಕಾರಿಗಳ
ಸಹಾಯದಲ್ಲಿ ರನ್ಯಾ ರಾವ್ ಅವರ ಮೊಬೈಲ್ ಅನ್ನು ವಿಶ್ಲೇಷಣೆಗೊಳಪಡಿಸಿದ್ದಾರೆ. ಕೆಲವರ ಜೊತೆ ರನ್ಯಾ ರಾವ್ ನಿರಂತರವಾಗಿ ಸಂಪರ್ಕದಲ್ಲಿರುವುದು ಕಂಡುಬಂದಿದೆ.
ಇದು ಚಿತ್ರರಂಗಕ್ಕೆ ಅಥವಾ ವೃತ್ತಿಜೀವನಕ್ಕೆ ಸೀಮಿತವಾದ ಸಂಪರ್ಕವೇ?, ಅದರ ಹೊರತಾಗಿ ಚಿನ್ನದ ಸಾಗಾಣಿಕೆಯಲ್ಲಿನ ಸಹಭಾಗಿತ್ವವೇ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.ಕಳೆದ 15 ದಿನಗಳಲ್ಲಿ ರನ್ಯಾ ರಾವ್ 4 ಬಾರಿ ದುಬೈ ಪ್ರವಾಸ ಕೈಗೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ತಾರಾ ಹೋಟೆಲ್ನಲ್ಲಿ ಅದ್ಧೂರಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಈಕೆ ವಿದೇಶ ಪ್ರವಾಸದ ಸಂದರ್ಭದಲ್ಲಿ ಚಿನ್ನ ಸಾಗಾಣಿಕೆ ನಡೆದಿತ್ತೇ ಎಂಬ ಬಗ್ಗೆ ಪರಿಶೀಲನೆಯಾಗುತ್ತಿದೆ.
ಈವರೆಗಿನ ತಪಾಸಣೆ ಹಾಗೂ ಜಪ್ತಿಗಳಲ್ಲಿ ಒಟ್ಟು 17 ಕೋಟಿ ರೂ.ಗಳ ಸಂಪತ್ತು ಪತ್ತೆಯಾಗಿದೆ. 2 ಚಿತ್ರಗಳಲ್ಲಿ ಅಭಿನಯಿಸಿ ಈ ಪ್ರಮಾಣದ ಸಂಪತ್ತು ಹೊಂದಿರುವುದು ಅಚ್ಚರಿಗೆ ಕಾರಣವಾಗಿದೆ. ಆಕೆಯ ಪತಿ ಜತಿನ್ ಹುಕ್ಕೇರಿ ಉದ್ಯಮಿಯಾಗಿದ್ದು, ಅವರ ಆದಾಯದ ಮೂಲಗಳನ್ನೂ ಸಹ ಶೋಧಿಸಲಾಗುತ್ತಿದೆ.
ರನ್ಯಾ ರಾವ್ ಅವರ ಮಲತಂದೆ ರಾಮಚಂದ್ರರಾವ್ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ವಸತಿ ನಿಗಮದ ಅಧ್ಯಕ್ಷರಾಗಿದ್ದು ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಆಕೆ ಮದುವೆಯಾಗಿ 4 ತಿಂಗಳಾಗಿದ್ದು, ಒಮೆಯೂ ನಮ ಮನೆಗೆ ಭೇಟಿ ನೀಡಿಲ್ಲ ಎಂದಿದ್ದಾರೆ.
ರನ್ಯಾ ಅವರು 12 ಕೋಟಿ ರೂ. ಮೊತ್ತದ ಚಿನ್ನವನ್ನು ವಿದೇಶದಲ್ಲಿ ಖರೀದಿಸಲು ಹಣಕಾಸಿನ ಸೌಲಭ್ಯಗಳು ಯಾವ ಮೂಲದಿಂದ ಬಂದಿವೆ ಎಂಬ ಬಗ್ಗೆ ತನಿಖೆ ನಡೆದಿದೆ. ಕೆಲವು ನಿರ್ಮಾಪಕರು ಹಾಗೂ ಫೈನಾನ್ಶಿಯರ್ಗಳ ಜೊತೆ ರನ್ಯಾ ರಾವ್ ಸಂಪರ್ಕದಲ್ಲಿರುವುದು ತಿಳಿದುಬಂದಿದೆ ಎಂದು ಹೇಳಲಾಗುತ್ತಿದೆ.
ಜೊತೆಗೆ ರಾಜಕಾರಣದಲ್ಲೂ ಕೆಲವರು ರನ್ಯಾ ಅವರ ಸಂಪರ್ಕದಲ್ಲಿರುವುದು ಮೊಬೈಲ್ ಸಂಪರ್ಕದ ವಿಶ್ಲೇಷಣೆಯಲ್ಲಿ ಗೊತ್ತಾಗಿದೆ ಎಂದು ಹೇಳಲಾಗುತ್ತಿದೆ. ಡಿಆರ್ಐ ಅಧಿಕಾರಿಗಳು ಈ ಸಂಪರ್ಕಗಳ ಬೆನ್ನು ಬಿದ್ದಿದ್ದಾರೆ.