ಹಾಸನ, ಮಾ.8- ತೀವ್ರ ಸಂಚಲನ ಸೃಷ್ಟಿಸಿದ್ದ ಮಹಿಳೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳ ಮೂಲದ ಆರೋಪಿಯನ್ನು ಅರಸೀಕೆರೆ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೇಪಾಳದ ಮೊರಾಂಗ್ ಜಿಲ್ಲೆಯ ಮೌಸಮ್ ಪಹಡಿ (25) ಬಂಧಿತ ಆರೋಪಿ. ಈತ ಕೂಲಿ ಕೆಲಸಕ್ಕೆಂದು ಹಾಸನಕ್ಕೆ ಬಂದಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಕಳೆದ ಫೆ.13ರಂದು ಬೆಳಗ್ಗೆ ಸಕಲೇಶಪುರ ರೈಲ್ವೆ ಯಾರ್ಡ್ನ ಟವರ್ ವ್ಯಾಗನ್ ಶೆಡ್ ಬಳಿ 40 ವರ್ಷದ ಅಪರಿಚಿತ ಮಹಿಳೆಯ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಲಾಗಿತ್ತು.
ನಿರ್ಮಾಣ ಹಂತದಲ್ಲಿನ ಈ ಶೆಡ್ನಲ್ಲಿ ಆಯಿಲ್ ಮತ್ತು ಪೆಟ್ರೋಲ್ ಸಂಗ್ರಹಿಸುವ ಕೋಣೆಯಲ್ಲಿ ಮೃತದೇಹ ಪತ್ತೆಯಾದ ನಂತರ ಭಾರೀ ಆತಂಕ ಸೃಷ್ಟಿಯಾಗಿತ್ತು. ಪೊಲೀಸರು ಪರಿಶೀಲಿಸಿದಾಗ ಆಕೆ ಮೇಲೆ ಅತ್ಯಾಚಾರವೆಸಗಿರುವುದು ತಿಳಿದುಬಂದಿತ್ತು.
ಈ ಬಗ್ಗೆ ರೈಲ್ವೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆರೋಪಿ ಪತ್ತೆಗೆ ಬೆಂಗಳೂರು ರೈಲ್ವೆ ಎಸ್ಪಿ ಡಾ.ಸೌಮ್ಯಲತಾ, ರೈಲ್ವೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಆರ್.ಸತೀಶ್ಕುಮಾರ್ ಮತ್ತು ಮೈಸೂರು ರೈಲ್ವೆ ವೃತ್ತದ ಪೊಲೀಸ್ ನಿರೀಕ್ಷಕ ಚೇತನ್ ನೇತೃತ್ವದಲ್ಲಿ ತಂಡವೊಂದನ್ನು ರಚಿಸಲಾಗಿತ್ತು.
ಯಾವುದೇ ಸುಳಿವು ಇರದ ಕಾರಣ ಈ ಪ್ರಕರಣ ಭೇದಿಸುವುದು ಭಾರೀ ಸವಾಲಾಗಿತ್ತು. ಸ್ಥಳೀಯ ಸಿಸಿಟಿವಿಗಳು ಹಾಗೂ ಮೊಬೈಲ್ ಟವರ್ಗಳು ಸೇರಿದಂತೆ ಹಲವಾರು ಆಯಾಮಗಳಲ್ಲಿ ತನಿಖೆ ನಡೆಸಿದ ನಂತರ ಆರೋಪಿ ಸಿಕ್ಕಿಬಿದ್ದಿದ್ದಾನೆ. ಘಟನೆ ಕುರಿತಂತೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.