ಬೆಂಗಳೂರು, ಮಾ.9- ಪ್ರತಿ ವರ್ಷದಂತೆ ಈ ವರ್ಷವೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತಮ್ಮ ಅನ್ ಬಾಕ್ಸ್ ಇವೆಂಟ್ ಅನ್ನು ಮಾರ್ಚ್ 17 ರಂದು ಹಮ್ಮಿಕೊಂಡಿದ್ದು ಸ್ಥಳೀಯ ಗಾಯಕರಾದ ಸಂಜಿತ್ ಹೆಗ್ಡೆ ಹಾಗೂ ಐಶ್ವರ್ಯಾ ರಂಗರಾಜನ್ ಅವರು ತಮ್ಮ ಸುಮಧುರ ಕಂಠದಿಂದ ಅಭಿಮಾನಿಗಳ ಮನರಂಜಿಸಲಿದ್ದಾರೆ.
ಹದಿನೇಳನೇ ಆವೃತ್ತಿಯ ಆನ್ಬಾಕ್ಸ್ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಆರ್ಸಿಬಿ ಜೆರ್ಸಿಯನ್ನು ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದ್ದರು. ಆದರೆ ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜನ್ಮದಿನದಂದೇ ಆರ್ ಸಿಬಿ ಅನ್ಬಾಕ್ಸ್ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ.
ಮಾರ್ಚ್ 17 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮದ ಟಿಕೆಟ್ ಗಳು ಆನ್ ಲೈನ್ ನಲ್ಲಿ 60 ನಿಮಿಷಗಳಲ್ಲಿ ಬಿಕರಿಯಾಗಿದ್ದು, ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸೇರಿದಂತೆ ಸ್ಥಳೀಯ ಹಾಗೂ ವಿಶ್ವಶ್ರೇಷ್ಠ ಆಟಗಾರರನ್ನು ಕಣ್ಣುಂಬಿಕೊಳ್ಳಲು ಅಭಿಮಾನಿಗಳು ಕಾತರಿಸುತ್ತಿದ್ದಾರೆ.
ಈಗ ಈ ಅನ್ ಬಾಕ್ಸ್ ಕಾರ್ಯಕ್ರಮವನ್ನು ಮತ್ತಷ್ಟು ರಸವತ್ತಾಗಿ ಮೂಡಿಬರಲೆಂದು ಸ್ಥಳೀಯ ಗಾಯಕರಾದ ಸಂಜಿತ್ ಹೆಗ್ಡೆ ಹಾಗೂ ಐಶ್ವರ್ಯಾ ರಂಗರಾಜನ್ ಗೆ ಅವಕಾಶ ನೀಡಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂದು ಕನ್ನಡದ ಗೀತೆಗಳು ಮುಗಿಲುಮುಟ್ಟಲಿದೆ.