ಬೆಂಗಳೂರು, ಮಾ.6- ಚಿನ್ನ ಕಳ್ಳ ಸಾಗಾಣಿಕೆಯ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ರನ್ಯಾ ರಾವ್ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಬಿಜೆಪಿಯ ವಿ.ಸುನೀಲ್ ಕುಮಾರ್ ವಿಷಯ ಪ್ರಸ್ತಾಪಿಸಿ, ಚಿತ್ರನಟಿ ರನ್ಯರಾವ್ ದುಬೈನಿಂದ ಚಿನ್ನ ಕಳ್ಳ ಸಾಗಾಣಿಕೆಯಲ್ಲಿ ಸಿಕ್ಕಿ ಬಿದ್ದಿರುವುದು ಎಲ್ಲರಿಗೂ ಗೊತ್ತಿದೆ. ಇದೊಂದು ಗಂಭೀರ ಪ್ರಕರಣ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಸಾಗಾಣಿಕೆಯಾಗುತ್ತಿದೆ.
ನಮ್ಮ ದೇಶದ ಬೇರೆ ರಾಜ್ಯಗಳಿಗೆ ಕಳ್ಳಸಾಗಾಣಿಕೆ ಬೆಂಗಳೂರು ಕೇಂದ್ರ ಸ್ಥಾನವಾಗಿದೆಯೇ ಎಂಬ ಅನುಮಾನ ಬರುತ್ತಿದೆ. ನಟಿ ರನ್ಯಾರಾವ್ ಗೆ ಪೊಲೀಸರೇ ಪ್ರೋಟೋಕಾಲ್ ನೀಡಿದ್ದರು ಎಂಬ ಆರೋಪಗಳಿವೆ. ಜೊತೆಗೆ ಇಬ್ಬರು ಸಚಿವರ ಕೈವಾಡ ಇರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಸರ್ಕಾರ ಚಿನ್ನ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಪರಮೇಶ್ವರ್, ಚಿನ್ನಕಳ್ಳ ಸಾಗಾಣಿಕೆ ವರದಿಯಾಗಿರುವುದು ವಿಮಾನ ನಿಲ್ದಾಣದಲ್ಲಿ, ಕೇಂದ್ರ ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಅವರು ಸಂಪೂರ್ಣ ಕೇಂದ್ರ ಸರ್ಕಾರಕ್ಕೆ ವರದಿ ಮಾಡಿಕೊಳ್ಳುತ್ತಾರೆ. ವಿಮಾನ ನಿಲ್ದಾನ ಕೂಡ ಕೇಂದ್ರ ಸರ್ಕಾರ ವ್ಯಾಪ್ತಿಯ ಒಳಗಿದೆ. ಈ ಪ್ರಕರಣದಲ್ಲಿ ರಾಜ್ಯದ ಪೊಲೀಸರಿಗಾಗಲಿ, ಸರ್ಕಾರಕ್ಕಾಗಲಿ ಯಾವುದೇ ಮಾಹಿತಿ ಇಲ್ಲ. ಹಾಗಂತ ನಾವು ಕಳ್ಳ ಸಾಗಾಣಿಕೆಯಾಗಿಲ್ಲ ಎಂದು ಹೇಳುತ್ತಿಲ್ಲ ಎಂದರು.
ರನ್ಯಾ ಅವರ ತಂದೆ ಪೊಲೀಸ್ ಮಹಾನಿರ್ದೇಶಕರಾಗಿದ್ಧಾರೆ. ಹಾಗಾಗಿ ಪೊಲೀಸ್ ವಾಹನದಲ್ಲಿ ಹೋಗಿ, ಬರುತ್ತಿದ್ದರು ಎಂಬ ಮಾಹಿತಿ ಇದೆ. ಅದೂ ತನಿಖೆಯಾಗಲಿ. ಸಚಿವರ ಕೈವಾಡ ಬಗ್ಗೆಯೂ ಸಿಬಿಐ ತನಿಖೆ ಮಾಡಲಿ, ವರದಿಯಲ್ಲಿ ಸತ್ಯಾಂಶ ಕಂಡು ಬಂದರೆ ಮುಂದೆ ಏನಾಗಲಿದೆ ಎಂದು ಎಲ್ಲರಿಗೂ ಗೊತ್ತಿದೆ ಎಂದರು.
ಗೃಹ ಸಚಿವರು ಮಾಹಿತಿ ಇಲ್ಲ ಎಂದು ಅಸಾಹಯಕತೆ ವ್ಯಕ್ತ ಪಡಿಸುವುದು ಸರಿಯಲ್ಲ. ಅಷ್ಟು ದೊಡ್ಡ ಪ್ರಮಾಣದ ಅಪರಾಧದ ಬಗ್ಗೆ ವಿಷಯವೇ ಗೊತ್ತಿಲ್ಲ ಎಂದರೆ ಇದನ್ನು ಒಪ್ಪಲು ಸಾಧ್ಯವಿಲ್ಲ. ಆಕೆ ಪೊಲೀಸರ ವಾಹನ ಬಳಸುತ್ತಿದರೂ ಅದರ ಕುರಿತು ತನಿಖೆಯನ್ನು ಸಿಬಿಐಗೆ ರಾಜ್ಯ ಸರ್ಕಾರ ಒಪ್ಪಿಸಬೇಕು. ಹಿರಿಯ ಅಧಿಕಾರ ಹಾಗೂ ಸಚಿವರ ಹೆಸರು ಕೇಳಿ ಬಂದಿರುವುದರಿಂದ ಕೇಂದ್ರ ತನಿಖಾ ಸಂಸ್ಥೆಗಳೇ ತನಿಖೆ ನಡೆಸುವುದು ಸೂಕ್ತ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಈ ಮೊದಲು ಸಿಬಿಐ ತನಿಖೆ ನಡೆಸುವುದಾದರೇ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಲಾಗುತ್ತಿತ್ತು. ರನ್ಯಾ ಪ್ರಕರಣದಲ್ಲಿ ನಮ ಅನುಮತಿಯನ್ನು ಕೇಳಿಲ್ಲ. ನಾವು ಕೂಡ ಮಾಧ್ಯಮಗಳಲ್ಲಿ ಓದಿ ತಿಳಿದುಕೊಂಡಿದ್ದೇವೆ. ಆಕೆ ಪೊಲೀಸ್ ವಾಹನದಲ್ಲಿ ಓಡಾಡಿರುವ ಬಗ್ಗೆ ನಮ ಹಂತದಲ್ಲಿ ನಡೆಯಬೇಕಾದ ತನಿಖೆಯನ್ನು ಮಾಡುತ್ತೇವೆ. ಕೇಂದ್ರ ಸರ್ಕಾರದ ತನಿಖೆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟ ಪಡಿಸಿದರು. ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಪೊಲೀಸ್ ವಾಹನದಲ್ಲಿ ಸಂಚರಿಸಿರುವ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸಿದರು.