ಹಾವೇರಿ,ಮಾ.10- ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಗಾಜು ಒಡೆದು 33 ಲಕ್ಷ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಹಾವೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಆಂಧ್ರಪ್ರದೇಶ ಮೂಲದ ಎ.ಜಗದೀಶ್ (28) ಎಂದು ಗುರುತಿಸಲಾಗಿದೆ.
ಸಿವಿಲ್ ಕಾಂಟ್ರ್ಯಾಕ್ಟರ್ ಸಂತೋಷ್ ಕಳೆದ ಮಾ.6 ರಂದು ಹಾವೇರಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದೈನಂದಿನ ವ್ಯವಹಾರಕ್ಕಾಗಿ 33 ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು, ತಮ್ಮ ಕಾರಿನ ಹಿಂಭಾಗದ ಸೀಟಿನಲ್ಲಿಟ್ಟುಕೊಂಡು ಸಂಜೆ 4:05ಕ್ಕೆ ಮನೆಗೆ ಬಂದಿದ್ದರು.
ಕಾರಿನಲ್ಲಿ ಹಣ ಬಿಟ್ಟು ಮನೆಯೊಳಗೆ ಹೋಗಿ. ಊಟ ಮಾಡಿ ವಾಪಸ್ ಸಂಜೆ 5:20ಕ್ಕೆ ಕಾರಿನ ಹತ್ತಿರ ಬಂದು ನೋಡಿದಾಗ ಕಾರಿನ ಗ್ಲಾಸ್ ಒಡೆದು ಹಣ ಕಳ್ಳತನ ಆಗಿರುವುದು ಬೆಳಕಿಗೆ ಬಂದಿತ್ತು.
ನಂತರ ಅವರು ಶಹರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು ನಂತರ ಪರಿಶೀಲನೆ ವೇಳೆ ಕಳ್ಳರ ಕೈಚಳಕದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು .ನಂತರ ತನಿಖೆ ವೇಳೆ 2 ಬೈಕ್‌ಗಳಲ್ಲಿ ಬಂದಿದ್ದ 4 ಜನ ಕಳ್ಳರಲ್ಲಿ ಒಬ್ಬ ಕಾರಿನ ಬಳಿ ಸುತ್ತಾಡಿ, ಕಾರಿನ ಗ್ಲಾಸ್ ಒಡೆದು ಕಾರಿನ ಒಳಹೊಕ್ಕು ಹಣವಿದ್ದ ಬ್ಯಾಗ್ ತೆಗೆದುಕೊಂಡಿದ್ದಾನೆ. ನಂತರ ಬೈಕ್‌ನಲ್ಲಿ ಬಂದ ಮತ್ತೊಬ್ಬ ಖದೀಮ ಆತನನ್ನು ಕರೆದುಕೊಂಡು ಪರಾರಿಯಾಗಿದ್ದ.ಕೇವಲ 33 ಸೆಕೆಂಡ್‌ನಲ್ಲಿ ಹಣ ದೋಚಲಾಗಿತ್ತು.
ಸಂಚು ರೂಪಿಸಿ ಈ ಕೃತ್ಯ ನಡೆಸಿರುವುದು ಗೊತ್ತಗಿ ವಿವಿಧ ಆಯಾಮದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಪ್ರಸ್ತುತ ಆತನಿಂದ 30 ಲಕ್ಷ ವಶಪಡಿಸಿಕೊಂಡಿದ್ದು ಉಳಿದ ಮೂವರಿಗಾಗಿ ಶೋಧ ನಡೆಸಲಾಗಿದೆ ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ.